

ಕೆ.ಆರ್.ನಗರ: ಹಳೇ ವಿದ್ಯಾರ್ಥಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ತಾವು ಕಲಿತ ಶಾಲೆಗಳನ್ನು ಉಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ಮೀನಾಕುಮಾರಿ ಪಾಟೀಲ್ ಹೇಳಿದರು.
ತಾಲೂಕಿನ ಮಾವತ್ತೂರು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಲಿತ ವಿದ್ಯೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ತಮ್ಮ ಬಾಲ್ಯದ ನೆನಪಿಗಾಗಿ ಸರ್ಕಾರಿ ಶಾಲೆ ಉಳಿಸಲು ಶ್ರಮಿಸಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಹಲವು ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ವಿಜ್ಞಾನಿಗಳಾಗಿದ್ದಾರೆ. ಅಕ್ಷರ, ಜ್ಞಾನ ನೀಡಿದ ಶಿಕ್ಷಕರನ್ನು ನೆನಪಿಸಿಕೊಂಡು ಗೌರವ ನೀಡಿದಂತೆ ನೀವು ಓದಿದ ಶಾಲೆಗಳ ಕಡೆಯೂ ಗಮನಹರಿಸಬೇಕು ಎಂದರು.
ಹಳೇ ವಿದ್ಯಾರ್ಥಿ, ರಾಷ್ಟ್ರೀಯ ಮಾನವ ಹಕ್ಕುಗಳ ತನಿಖಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಮಹದೇವ್ ಮಾತನಾಡಿ, ಮೀನಾಕುಮಾರಿ ಪಾಟೀಲ್ ಅವರು, ಕೆ.ಆರ್.ನಗರ ತಾಲೂಕಿನ ಮಾವತ್ತೂರು ಸರ್ಕಾರಿ ಪ್ರೌಢ ಶಾಲೆಗೆ 1988ರಂದು ಪ್ರಥಮವಾಗಿ ಕರ್ತವ್ಯಕ್ಕೆ ಹಾಜರಾಗಿ ಅಲ್ಲಿ ಸುಮಾರು 15ಕ್ಕೂ ಹೆಚ್ಚು ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡ ನಂತರ ಕೆ.ಆರ್.ನಗರ, ಮೈಸೂರು ಮತ್ತು ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ 37ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಶಾಲಾ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಹುದ್ದೆಗೆ ಮುಂಬಡ್ತಿ ಹೊಂದಿದ್ದಾರೆ. ನಮ್ಮ
ಗುರುಗಳು ಅಧಿಕಾರಿಯಾಗಿ ಮುಂಬಡ್ತಿ ಹೊಂದಿರುವುದು ನಮಗೆ ಸಂತೋಷವಾಗಿದೆ. ಇದರಿಂದ ಮಾರಗೌಡನಹಳ್ಳಿ ಹಳೇ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಗುರು ವಂದನೆ ಸಲ್ಲಿಸಿದ್ದೇವೆ ಎಂದರು.
ತಾಲೂಕಿನ ಮಾವತ್ತೂರು ಮಾರಗೌಡನಹಳ್ಳಿ ಗ್ರಾಮದ ಹಳೇ ವಿದ್ಯಾರ್ಥಿಗಳಾದ ಪಿಡಿಒ ಆನಂದ, ಗ್ರಾಪಂ ಸದಸ್ಯ ಕೆ.ಸ್ವಾಮಿ, ಉಪನ್ಯಾಸಕ ರವಿ, ದೇವರಾಜಶೆಟ್ಟಿ ಮಾತನಾಡಿದರು.
ಜಿಲ್ಲಾ ರೈತ ಸಂಘ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಡೇರಿ ಕಾರ್ಯದರ್ಶಿ ತಿರ್ತೇಶ್, ಶಿಕ್ಷಕ ಮುಕ್ಕಣ್ಣ, ವೆಂಕಟರಾಜು, ಬಸವರಾಜು, ಜಯರಾಮ, ಚಾಮರಾಜು ಇತರರು ಇದ್ದರು.