

ಬೆಂಗಳೂರು: ಮಣ್ಣು ಉಳಿಸಿ ಅಭಿಯಾನವನ್ನು ಸದ್ಗುರು ಅವರು ಪ್ರಪಂಚದಾದ್ಯಂತ 30,000 ಕಿ.ಮೀ. ಏಕಾಂಗಿಯಾಗಿ ಬೈಕ್ನಲ್ಲಿ ಸಂಚರಿಸಿ 27 ದೇಶಗಳನ್ನು ಸುತ್ತಾಡಿ ಜಾಗೃತಿ ಮೂಡಿಸಿದ ಬಳಿಕ ಕರ್ನಾಟಕದಲ್ಲಿ ಸ್ವಯಂಸೇವಕರು ಹಾಸನ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ನಗರಗಳಲ್ಲಿ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅದನ್ನು ಸಕ್ರಿಯವಾಗಿ ಮುನ್ನಡೆಸಿದರು.
ಚಿಕ್ಕಮಗಳೂರಿನ ಆದಿಚುಂಚುನಗಿರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಐಟಿ) ಕಾಲೇಜಿನಲ್ಲಿ ‘ಮಣ್ಣು ಉಳಿಸಿ’ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಸಿ.ಟಿ. ಜೈದೇವ, ರಾಜ್ಯ ಬಿ.ಜೆ.ಪಿ ಮಹಿಳಾ ವಿಭಾಗದ ಉಪಾಧ್ಯಕ್ಷೆ ಪಲ್ಲವಿ ಸಿ.ಟಿ. ರವಿ ಅವರು ಸುಮಾರು 400 ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು. ಮಣ್ಣು ಉಳಿಸಿ ಅಭಿಯಾನವನ್ನು ಕಾರ್ಯನೀತಿ ಬದಲಾವಣೆಯ ಹಂತಕ್ಕೆ ಮುಟ್ಟುವ ತನಕ ಅದನ್ನು ಜನಸಾಮಾನ್ಯರಲ್ಲಿ ಇದೇ ರೀತಿ ಜಾಗೃತಿ ಮೂಡಿಸುತ್ತಿರಬೇಕು ಎಂದು ಈಶ ಔಟ್ ರೀಚ್ನ ಸ್ವಯಂ ಸೇವಕರೊಂದಿಗೆ ಆಶಯ ವ್ಯಕ್ತಪಡಿಸಿದರು.
ಬೈಕರ್ಗಳು ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಕಾರ್ಯಕ್ರಮದ ನಂತರ ಜೋರಾಗಿ ಸುರಿಯುತ್ತಿದ್ದ ಮಳೆಯ ನಡುವೆ ತಮ್ಮ ಪ್ರಯಾಣ ಮುಂದುವರಿಸಿದರು. ಬೈಕರ್ಗಳು ಬಳಿಕ ಬೇಲೂರು ಚೆನ್ನಕೇಶವ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳು, ಸಾಧು-ಸಂತರು ಹಾಗೂ ಸಾರ್ವಜನಿಕರಲ್ಲಿ ಅಭಿಯಾನದ ಕುರಿತು ಜಾಗೃತಿ ಮೂಡಿಸಿದರು.
ಮೂಡಿಗೆರೆಯ ತೋಟಗಾರಿಕಾ ಕಾಲೇಜು ಹಾಗೂ ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ನೆರೆದಿದ್ದ ಜನರನ್ನು ಕನ್ನಡ ರಾಪರ್ ‘ಎಂ.ಜಿ’ ಮತ್ತು ‘ಗುಬ್ಬಿ’ ಅವರು ಸಂಗೀತ ಪ್ರದರ್ಶನದ ಮೂಲಕ ರಂಜಿಸಿದರು.