

ಶಿರಸಿ: ವೃಕ್ಷ ಲಕ್ಷ ಆಂದೋಲನದ ನಿಯೋಗ ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ ಸಿಸಿಎಫ್ ವಸಂತ ರೆಡ್ಡಿ ಅವರೊಂದಿಗೆ ಬೆಟ್ಟ ಸಂರಕ್ಷಣೆ ಕುರಿತು ವಿವರ ಸಮಾಲೋಚನೆ ನಡೆಸಿತು.
ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಅಶೀಸರ ಅವರ ನೇತೃತ್ವ ಈ ನಿಯೋಗ, ಬೆಟ್ಟ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿ ಮಾಡಲು ಮನವಿ ಮಾಡಿತು. ಮೇ 22ರಿಂದ ಆರಂಭವಾಗಲಿರುವ ಬೆಟ್ಟ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಅಭಿಯಾನದ ಆಹ್ವಾನ ಪತ್ರಿಕೆಯನ್ನು ಸಂಚಾಲಕ ಕೆ. ಗಣಪತಿ ಬಿಸಲಕೊಪ್ಪಅವರು ವಸಂತ ರೆಡ್ಡಿ ಅವರಿಗೆ ನೀಡಿದರು.
ಈ ವೇಳೆ ಮಾತನಾಡಿದ ಅನಂತ ಅಶೀಸರ, ಪಶ್ಚಿಮ ಘಟ್ಟದ ಗ್ರಾಮಗಳ ಸಾಮೂಹಿಕ ನೈಸರ್ಗಿಕ ಭೂಮಿಗಳಾದ ಬೆಟ್ಟ, ಕಾನು, ಗೋಮಾಳ, ದೇವರ ಕಾನುಗಳ ನಾಶ ತಪ್ಪಿಸಲು ಅರಣ್ಯ ಮತ್ತು ಕಂದಾಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯಲ್ಲಾಪುರ ಆನಗೋಡದಿಂದ ಚಾಲನೆಗೊಳ್ಳಲಿರುವ ಬೆಟ್ಟ ಜಾಗೃತಿ ಅಭಿಯಾನ ಶೃಂಗೇರಿ ಅಡ್ಡಗದ್ದೆವರೆಗೆ ಮುನ್ನಡೆಯಲಿದೆ ಎಂದು ತಿಳಿಸಿದರು. ಸಿಸಿಎಫ್ ರೆಡ್ಡಿ, ಬೆಟ್ಟ ಅಭಿಯಾನ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜೆ.ಆರ್., ಯಲ್ಲಾಪುರದ ಡಿಸಿಎಫ್. ಹರ್ಷಬಾನು, ಈಶಣ್ಣ ನೀರ್ನಳ್ಳಿ, ವಿಶ್ವನಾಥ ವರ್ಗಾಸರ, ಮಂಜುನಾಥ ಹಾಗೂ ಸಿದ್ದಾಪುರ, ಶಿರಸಿ, ಯಲ್ಲಾಪುರದ ಕಾರ್ಯಕರ್ತರಿದ್ದರು.