

ಕುಣಿಗಲ್
ಕುಣಿಗಲ್ ಪಟ್ಟಣದಲ್ಲಿರುವ ಐತಿಹಾಸಿಕ ಸ್ಟಡ್ ಫಾರ್ಮ್ ಜಾಗದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಯೋಜನೆ ವಿರೋಧಿಸಿ ಹೋರಾಟ ತೀವ್ರಗೊಳ್ಳುತ್ತಿದೆ. ಪಾರಂಪರಿಕ ಕುಣಿಗಲ್ ಕುದರೆ ಫಾರ್ಮ್ ಉಳಿವಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಜ.17 (ಬುಧವಾರ) ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದು ಅಭಿವೃದ್ಧಿ ಹೆಸರಲ್ಲಿ ಕುದರೆ ಫಾರಂ ಜಾಗವನ್ನು ಸರ್ಕಾರ ಯಾವುದೇ ಯೋಜನೆಗೆ ಮಂಜೂರ ಮಾಡದಂತೆ ಒಮ್ಮತದ ಕೂಗು ಎದ್ದಿದೆ.
ಪಶು ಸಂಗೋಪನಾ ಇಲಾಖೆ ವಶದಲ್ಲಿರುವ ಬೆಲೆಬಾಳುವ 421 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್‌ಗಳಿಗೆ ನೀಡದೆ ಇದನ್ನು ಭಾರತದ ಪಾರಂಪಾರಿಕ ತಾಣ ಎಂದು ಘೋಷಣೆ ಮಾಡುಬೇಕೆನ್ನುವುದು ತಾಲೂಕಿನ ಪ್ರಗತಿಪರ ಚಿಂತಕರು, ಸಂಘ ಸಂಸ್ಥೆ ಪದಾಧಿಕಾರಿಗಳು, ವಕೀಲರ ಸಂಘ, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇತರೆ ಅನೇಕ ಮಂದಿ ಹಿರಿಯ ಹೋರಾಟಗಾರರ ಆಗ್ರಹವಾಗಿದೆ.
ಸಾಂಕೇತಿಕ ಮೆರವಣಿಗೆ: ಬುಧುವಾರ ಕೇವಲ ಸಾಂಕೇತಿ ಕ ಪ್ರತಿಭಟನಾ ಧರಣಿ ಮಾತ್ರ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10.30ಕ್ಕೆ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರೆಗೂ ಈ ಪ್ರತಿಭಟನಾ ಮೆರವಣಿಗೆ ಸಾಗಿ ತಾಲೂಕು ಕಚೇರಿ ಅವರಣದಲ್ಲಿ ಧರಣಿ ನಡೆಸಿ ತಹಸೀಲ್ದಾರ್‌ಗೆ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗುವುದು. ಸ್ಟಡ್ ಫಾರ್ಮ್ ಉಳಿಸಿ ಹೋರಾಟದ ನೆಪದಲ್ಲಿ ಶಾಸಕ ಡಾ.ರಂಗನಾಥ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ಧ ಬಿಜೆಪಿ-ಜೆಡಿಎಸ್ ಮುಖಂಡರು ಒಗ್ಗೂಡಿದ್ದು ಈ ಹೋರಾಟ ರಾಜಕೀಯ ತಿರುವು ಪಡೆಯುವ ಸಾಧ್ಯತೆಗಳು ಹೆಚ್ಚಿವೆ.
ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಸಂಬಂಧ ಬೆಳಗಾವಿ ಸುವರ್ಣ ಸೌಧದಲ್ಲಿ ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು ಈ ಮಹತ್ವದ ಸಭೆಯ ಬಗ್ಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿಯೂ ಹಂಚಿಕೊಂಡಿದ್ದರು. ಹಾಗಾಗಿ, ಈ ಪಾರಾಂಪರಿಕ ಸ್ಥಳವನ್ನು ಕುದುರೆ ಸಾಕಾಣಿಕೆಗಷ್ಟೇ ಮೀಸಲಿಡುವಂತೆ ಸಂಬಂಧಿಸಿದ ಇಲಾಖೆ ಸಚಿವರು, ಸಿಎಂ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗು ಹಾಗೂ ಕೇಂದ್ರ ಸರ್ಕಾರಕ್ಕೆ ಪಾರಂಪರಿಕ ಕುಣಿಗಲ್ ಕುದರೆ ಫಾರ್ಮ್ ಉಳಿವಿಗಾಗಿ ಹೋರಾಟ ಸಮಿತಿ ಮನವಿ ಸಹ ನೀಡಿತ್ತು. ಆದರೆ, ಸರ್ಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದರಿಂದ ಹೋರಾಟದ ಹಾದಿ ಹಿಡಿಯಲಾಗಿದೆ.
ಕುಣಿಗಲ್ ಕುದುರೆ ಫಾರ್ಮ್ ಅನ್ನು ಖಾಸಗಿಯವರಿಗೆ ನೀಡಲು ಹೊರಟಿರುವುದನ್ನು ವಿರೋಧಿಸಿ ಕರೆ ನೀಡಿರುವ ಹೋರಾಟಕ್ಕೆ ವಕೀಲರ ಸಂಘವು ಕೋರ್ಟ್ ಕಾರ್ಯ ಕಲಾಪದಿಂದ ದೂರ ಉಳಿದು ಬೆಂಬಲಿಸುತ್ತಿದ್ದೇವೆ. ತಾಲೂಕು ಆಡಳಿತ ಈ ಯೋಜನೆ ಕೈಬಿಡಬೇಕು. ತಾಲೂಕಿನ ಜನತೆಗೆ ನ್ಯಾಯ ಒದಗಿಸಬೇಕು. ಶಿವಪ್ರಸಾದ್ ಅಧ್ಯಕ್ಷ, ಕುಣಿಗಲ್ ತಾಲೂಕು ವಕೀಲರ ಸಂಘ ಐತಿಹಾಸಿಕ ಸ್ಟಡ್ ಫಾರ್ಮ್ ಉಳಿವಿಗಾಗಿ ಪಕ್ಷಾತೀತ ಹೋರಾಟ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಸಾಹಿತಿಗಳು, ಪ್ರಗತಿಪರರು, ಪರಿಸರವಾದಿಗಳು ಇದಕ್ಕೆ ಬೆಂಬಲ ಘೋಷಿಸಿದ್ದಾರೆ. ಅಭಿವೃದ್ಧಿ ಹೆಸರಲ್ಲಿ ಈ ಪಾರಂಪಾರಿಕ ಸ್ಥಳ ನುಂಗಲು ಹೊರಟಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯ. ಜಗದೀಶ್‌ನಾಗರಾಜಯ್ಯ ಅಧ್ಯಕ್ಷ, ಜೆಡಿಎಸ್ ತಾಲೂಕು ಘಟಕ ಈ ನೆಲದ ಸಂಸ್ಕೃತಿ, ಪರಂಪರೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಸ್ಟಡ್ ಫಾರಂ ನಲ್ಲಿ ಯಾವುದೇ ಕಾರಣಕ್ಕೂ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ. ಸರ್ಕಾರ ಈ ಯೋಜನೆ ಕೈಬಿಡದೆ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ತೀವ್ರಗೊಳಿಸಲಾಗುವುದು. ಎಚ್.ಡಿ.ರಾಜೇಶಗೌಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಶ್ವ ಪ್ರಸಿದ್ಧ ಕುಣಿಗಲ್ ಕುದುರೆ ಫಾರ್ಮ್ ನಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್‌ನಿರ್ಮಾಣ ಮಾಡುವ ಯೋಜನೆ ರಾಜ್ಯಕ್ಕೆ ಆಘಾತ ತಂದಿದೆ. 200 ಕಾರ್ಮಿಕರು ಈ ಫಾರಂನಲ್ಲಿ ಕೆಲಸ ಮಾಡುತ್ತಿದ್ದು ಅವರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಜೀವವೈವಿಧ್ಯತೆಯ ಈ ಜಾಗವನ್ನು ನಾಶ ಮಾಡುತ್ತಿರುವುದು ಖಂಡನೀಯ ಜಿ.ಕೆ.ನಾಗಣ್ಣ ಹೋರಾಟಗಾರ ನಿಜವಾಗಿಯು ಶಾಸಕ ರಂಗನಾಥ್‌ಗೆ ಅಭಿವೃದ್ಧಿ ದಾಹ ಇದ್ದರೆ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿವೆ ಅದನ್ನು ಮಾಡಲಿ. ಅದನ್ನು ಬಿಟ್ಟು ಐತಿಹಾಸಿಕ ಸ್ಟಡ್ ಫಾರ್ಮ್ ಅಭಿವೃದ್ಧಿ ಪಡಿಸಿ ವಿದೇಶಿಗರಿಗೆ, ಹಣವಂತರಿಗೆ ವಿಲ್ಲಾಗಳನ್ನು ನಿರ್ಮಿಸಿಕೊಡುವುದು ಅಭಿವೃದ್ಧಿ ಅಲ್ಲ. ಇದಕ್ಕೆ ನಮ್ಮ ವಿರೋಧ ಇದೆ. ತರೀಕೆರೆ ಕುಳ್ಳಯ್ಯ ಪ್ರಕಾಶ್ ಸಮಾಜ ಸೇವಕರು