

ಕಿಕ್ಕೇರಿ: ಸರ್ಕಾರಿ ಶಾಲೆಗಳನ್ನು ಉಳಿಸಲು ಪಾಲಕರು ಮುಂದಾಗಬೇಕು ಎಂದು ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮನವಿ ಮಾಡಿದರು.
ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಪ್ರತಿಷ್ಠೆಗಾಗಿ ಖಾಸಗಿ ಶಾಲೆಗಳ ವ್ಯಾಮೋಹ ಬೇಡ. ಸಾಧಕರೆಲ್ಲರೂ ಬಹುತೇಕ ಸರ್ಕಾರಿ ಶಾಲೆಗಳು, ಮಾತೃಭಾಷೆ ಶಾಲೆಯಲ್ಲೇ ಓದಿದವರು ಎಂದು ಹೇಳಿದರು.
ಗ್ರಾಮವು ಹೊಯ್ಸಳರ ಕಲೆಯ ಬೀಡಾಗಿದೆ. ಮಕ್ಕಳಿಗೆ ಗ್ರಾಮದ ಮಹತ್ವ, ರಾಜಮಹಾರಾಜರ ಇತಿಹಾಸ ತಿಳಿಸಿ. ಇತಿಹಾಸ, ಪರಂಪರೆ, ಕೋಟೆ, ಕೊತ್ತಲಗಳ ಉಳಿಸುವ ಕೆಲಸವಾಗಬೇಕಿದೆ. ನಾಡು-ನುಡಿ ಬಿಂಬಿಸುವ ಜಾನಪದ, ಭರತನಾಟ್ಯ, ನಾಟಕದಂತಹ ವಿವಿಧ ಮನೋರಂಜನಾ ಕಾರ್ಯಕ್ರಮಕ್ಕೆ ಒತ್ತು ನೀಡಿ. ಮೊಬೈಲ್ ಮಕ್ಕಳ ಮನಸ್ಥಿತಿ ಹಾಳು ಮಾಡುತ್ತಿದೆ. ಆದರಿಂದ ದೂರವಿರುವಂತೆ ಪಾಲಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಿಆರ್‌ಪಿ ನಾಗರಾಜು, ಶ್ರೀಕಾಂತರಾಜೇ ಅರಸ್, ಎಪಿಪಿ ಶಿವಾನಂದ್, ಬಿಆರ್‌ಪಿ ಬೋರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಉಪಾಧ್ಯಕ್ಷ ಎಲ್.ಎಸ್. ಧರ್ಮಪ್ಪ, ಸ್ಮಿತಾ, ಸರಸ್ವತಿ, ನೇತ್ರಾವತಿ ಮತ್ತಿತರರಿದ್ದರು.