ತೆಂಗಿನ ಮರಗಳನ್ನು ಉಳಿಸಿ ಬೆಳೆಸಿರಿ

NOV. 21, HNPUR., FILE 1.
Published on

ಹೊಳೆನರಸೀಪುರ: ತೆಂಗಿನ ಮರವನ್ನು ಕಲ್ಪವೃಕ್ಷವೆಂದು ಪೂರ್ವಿಕರು ಪೂಜಿಸಿ, ಅದರ ಮಹತ್ವವನ್ನು ನಮಗೆ ತಿಳಿಸಿ ಹೋಗಿದ್ದಾರೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು ಎಂದು ಶಾಸಕ ಎ.ಮಂಜು ಹೇಳಿದರು.


ಹಳ್ಳಿಮೈಸೂರು ಗ್ರಾಮದ ಶ್ರೀ ಆದಿಶಕ್ತಿ ಶಿಗೆತಾಳಮ್ಮ ದೇವಾಲಯದ ಆವರಣದಲ್ಲಿ ಮಂಗಳವಾರ ತೋಟಗಾರಿಕೆ ಇಲಾಖೆ ವತಿಯಿಂದ ತೆಂಗಿನ ಬೆಳೆಯ ಬೇಸಾಯ ಕ್ರಮಗಳು, ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ವ್ಯವಸಾಯ ಮಾಡಿದಲ್ಲಿ ಲಾಭ ಗಳಿಸಬಹುದಾಗಿದೆ. ರೈತರ ಮಕ್ಕಳು ಇಂದು ಪಟ್ಟಣಕ್ಕೆ ಮನಸೋತು ಇಲ್ಲದ ಜಂಜಾಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇದರಿಂದ ಆರೋಗ್ಯದ ಜತೆಗೆ, ಮಾನಸಿಕ ನೆಮ್ಮದಿಯೂ ಕೆಡುತ್ತದೆ ಎಂದು ಹೇಳಿದರು.


ಅರಸೀಕೆರೆ ತೋಟಗಾರಿಕೆ ಇಲಾಖೆಯ ವಿಜ್ಞಾನಿ ಬಸವರಾಜು ಹಾಗೂ ಜಗದೀಶ್ ತೆಂಗಿನ ಬೆಳೆಯ ಬೇಸಾಯ ಕ್ರಮಗಳು, ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಜತೆಗೆ ಹನಿ ನೀರಾವರಿ ಕುರಿತು ಸಮಗ್ರವಾಗಿ ವಿವರಿಸಿದರು. ತೋಟಗಾರಿಕೆ ಇಲಾಖೆಯ ತೆಂಗಿನ ಮರಗಳ ಪೋಷಣೆ ಹಾಗೂ ಇತರ ಸಮಗ್ರ ಮಾಹಿತಿ ಒಳಗೊಂಡ ಭಿತ್ತಿಪತ್ರಗಳನ್ನು ವಿತರಿಸಿ, ಪ್ರಾತ್ಯಕ್ಷಿಕೆ ನೀಡುವ ಮೂಲಕ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿದರು. ತೋಟಗಾರಿಕೆ ಇಲಾಖೆಯಿಂದ ರೈತರಿಗೆ ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಯಿತು.


ಹಳ್ಳಿಮೈಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಶಾಂಭಶಿವಪ್ಪ, ತಾ.ಪಂ. ಮಾಜಿ ಸದಸ್ಯ ಶಿವಸ್ವಾಮಿ, ತೋಟಗಾರಿಕೆ ಇಲಾಖೆಯ ಅಧಿಕಾರಿ ರಘು, ದೊಡ್ಡೇಗೌಡ, ಚಂದ್ರಶೇಖರ್, ರವೀಶ್, ರವಿಕುಮಾರ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net