ಶಸ್ತ್ರವಿಲ್ಲದೆ ಸ್ವಾತಂತ್ರ್ಯ ಸಿಗಲ್ಲ ಎಂದು ಸಾವರ್ಕರ್ ನಂಬಿದ್ದರು!

Mythic Society
Published on

ಬೆಂಗಳೂರು: ಸಾವರ್ಕರ್​ ವಿಚಾರವಾಗಿ ಬ್ರಿಟಿಷರ ದೃಷ್ಟಿಕೋನದಲ್ಲಿ ಚರಿತ್ರೆ ಓದಿದರೆ 'ಕ್ಷಮೆಯ ಚರಿತ್ರೆ' ಮಾತ್ರ ಓದಲು ಸಾಧ್ಯ. ಹಿಂದುಗಳ ದೃಷ್ಟಿಕೋನದಲ್ಲಿ ಓದಿದಾಗ ಸ್ವಾತಂತ್ರ್ಯದ ಭಾವ ಅರ್ಥವಾಗುತ್ತದೆ ಎಂದು ರಂಗಕರ್ಮಿ ಎಸ್​.ಎನ್​. ಸೇತುರಾಂ ಹೇಳಿದ್ದಾರೆ.

ಸಾವರ್ಕರ್​ ಸಾಹಿತ್ಯ ಸಂದ ವತಿಯಿಂದ ನೃಪತುಂಗ ರಸ್ತೆಯ ದಿ ಮಿಥಿಕ್​ ಸೊಸೈಟಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 'ಸಾವರ್ಕರ್​ ಸಮಗ್ರ ಸಂಪುಟ-1' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಶಾಂತಿಯುತವಾಗಿ ಸ್ವಾತಂತ್ರ ಲಭಿಸಿತು, ಸಾವು&ನೋವುಗಳಿರಲಿಲ್ಲ' ಎಂದು ನಂಬಿದ್ದ ಸತ್ಯಗಳು ಸಾವರ್ಕರ್​ ಪುಸ್ತಕದಿಂದ ಸುಳ್ಳು ಎಂಬುದು ತಿಳಿಯುತ್ತದೆ. ಶಸ್ತ್ರವಿಲ್ಲದೆ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದನ್ನು ಸಾವರ್ಕರ್​ ಸ್ಪಷ್ಟವಾಗಿ ಮನಗಂಡಿದ್ದರು. ಕೊನೆಗೂ ಶಸ್ತ್ರದ ಹೆದರಿಕೆಯಿಂದಲೇ ಸ್ವಾತಂತ್ರ ಸಿಕ್ಕಿರುವುದು ವಾಸ್ತವ. ಆದರೆ ಶಾಂತಿ ಮಂತ್ರದಿಂದ ಸ್ವಾತಂತ್ರ ಸಿಕ್ಕಿದೆ ಎಂದು ಪಠ್ಯಗಳಲ್ಲಿ ಬೋಧಿಸಲಾಗಿದೆ ಎಂದರು.

ಸಮಾಜದಲ್ಲಿ ಇಂದಿಗೂ ಬಂಡತನ ಹಾಗೂ ಲೂಟಿ ಮುಂದುವರಿದಿದೆ. ನಾವ್ಯಾಕೆ ಅದನ್ನು ಸಹಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳಬೇಕಾದಾಗ 'ಸಾವರ್ಕರ್​ ಆತ್ಮಚರಿತ್ರೆ' ಪ್ರಸ್ತುತವಾಗುತ್ತದೆ. ಅಧಿಕಾರದಲ್ಲಿದ್ದು ಸುಳ್ಳು ಹೇಳುವುದು, ಲೂಟಿ ಮಾಡುವುದು, ಆಡಳಿತ ವ್ಯವಸ್ಥೆಯಲ್ಲಿರುವ ಭಂಡತನ ಬ್ರಿಟಿಷರಿಂದ ಬಂದ ಬಳುವಳಿಯಾಗಿದೆ. 'ಕಳ್ಳತನ' ಬ್ರಿಟಿಷರ ಸಂಸತಿಯಾಗಿದ್ದು, ಇಂದಿಗೂ ಅವರ ಆರ್ಥಿಕತೆ 'ಲೂಟಿ' ಮೇಲೆ ನಿಂತಿದೆ. ಈ ದೇಶದಲ್ಲಿ ಯಾರಾದರೂ ದುಡ್ಡು ಕೊಳ್ಳೆ ಹೊಡೆದರೆ, ಅದನ್ನು ಇಂಗ್ಲೆಂಡ್​ಗೆ ಸಾಗಿಸಬಹುದು. ಸಮಸ್ಯೆ ಬಂದರೆ ಅದನ್ನು ಕಾಯಲೂ ಸಿದ್ಧರಿದ್ದಾರೆ. ಬೇರೆ ರಾಷ್ಟ್ರದ ಜೇಬು ಕತ್ತರಿಸಿ ಬ್ರಿಟಿಷ್​ ದೇಶಗಳು ಜೀವನ ನಡೆಸುತ್ತಿವೆ ಎಂದು ವಿವರಿಸಿದರು.

ಹೊಲಸು ಬದುಕನ್ನು ಬದುಕಿ, ಭಂಡತನದಿಂದ ಅದರ ಬಗ್ಗೆ ಬರೆದುಕೊಂಡು ಪ್ರಕಟಿಸುವುದೇ ಇತ್ತೀಚೆಗೆ ಅದ್ಭುತ ಆತ್ಮಚರಿತ್ರೆ ಎಂದಾಗಿದೆ. ಈ ರೀತಿ ಬರೆದುಕೊಂಡವರು ಸಮಾಜದಲ್ಲಿ ಯಾವ ವಿಚಾರಕ್ಕೆ ಉದಾಹರಣೆಯಾಗುತ್ತೀರಿ? ಹೊಲಸುತನದೊಂದಿಗೆ ಬದುಕಿದ್ದರೆ ದಯವಿಟ್ಟು ಆತ್ಮಚರಿತ್ರೆ ಬರೆದುಕೊಳ್ಳಬೇಡಿ. -ಎಸ್​.ಎನ್​. ಸೇತುರಾಂ, ಹಿರಿಯ ರಂಗಕರ್ಮಿ

ಲೆಕ್ಕಾಚಾರದ ಹೋರಾಟವಲ್ಲ...

ಕೆಲ ನಾಯಕರು ತಮ್ಮ ಜೀವನದ ಯಾವ ಕಾಲಟ್ಟದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು ಎಂಬ ಪ್ರಶ್ನೆ ಮುಖ್ಯವಾಗುತ್ತದೆ. ಹುಟ್ಟಿನಿಂದಲೇ ತೊಡಗಿಸಿಕೊಂಡರಾ ಅಥವಾ ಚೆನ್ನಾಗಿ ದುಡಿದು, ಹೆಂಡತಿ&ಮಕ್ಕಳನ್ನು ಸಲುಹಿದ ನಂತರ ಹೋರಾಟದಲ್ಲಿ ಪಾಲ್ಗೊಂಡರಾ ಎಂಬ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. 50ನೇ ವರ್ಷದ ವಯಸ್ಸಿನವರೆಗೆ ಗಾಂಧೀಜಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದಿರಲಿಲ್ಲ ಎಂಬುದು ವಾಸ್ತವ. ಕೆಲ ನಾಯಕರು ಭೌತಿಕ ವ್ಯವಸ್ಥೆಗಳನ್ನು ಸಂಪಾದಿಸಿದ ಬಳಿಕ ಹೋರಾಟಕ್ಕೆ ಧುಮುಕಿದರು. ಆದರೆ ಸಾವರ್ಕರ್​, ಭಗತ್​ ಸಿಂಗ್​, ಖುದಿರಾಮ್​ ಬೋಸ್​ ಮುಂತಾದವರು ಮೀನ-ಮೇಷ ಎಣಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಂದವರಲ್ಲ. "ಲೆಕ್ಕಾಚಾರ ಮಾಡಿದ ಹಾಗೂ ಲೆಕ್ಕಾಚಾರ ಮಾಡದ' ಹೋರಾಟಗಾರರ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದೆ ಎಂದು ಇತಿಹಾಸಕಾರ ಡಾ.ಜಿ.ಬಿ. ಹರೀಶ್​ ಹೇಳಿದರು.

ಮಿಥಿಕ್​ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್​, ಮಾಜಿ ಎಂಎಲ್​ಸಿ ಡಾ.ಎಸ್​.ಆರ್​. ಲೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net