ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಹಾಸಭೆ : ಸದಸ್ಯರಿಗೆ ಶೇ.14 ಡಿವಿಡೆಂಡ್ ಘೋಷಣೆ

New Project (3)
Published on

ವಿಜಯವಾಣಿ ಸುದ್ದಿಜಾಲ ಕಡಬ

ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವ್ಯವಹಾರ ಮಾಡಿ 1.67 ಕೋಟಿ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು.

ಸಂಘದ ಸಭಾಂಗಣದಲ್ಲಿ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದಸ್ಯರ ಸಹಕಾರದಿಂದಾಗಿ ಸಂಘವು ಸತತವಾಗಿ 23ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.25 ಸಾಲ ವಸೂಲಾತಿ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ 3,525 ಸದಸ್ಯರಿದ್ದು, 5.72 ಕೋಟಿ ರೂ. ಪಾಲು ಬಂಡವಾಳ, 40.34 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ 66.10. ಕೋಟಿ ರೂ. ಸಾಲ ವಿತರಿಸಿ, ವರ್ಷಾಂತ್ಯಕ್ಕೆ 58.07 ಕೋಟಿ ರೂ. ಹೊರಬಾಕಿ ಸಾಲ ಇದೆ. ಪ್ರತಿ ದಿನ ಮಾಸ್ ಸಂಸ್ಥೆ ಮೂಲಕ ಸಂಘದಲ್ಲಿ ಅಡಕೆ ಖರೀದಿ ವ್ಯವಹಾರ ಮಾಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 4.86 ಕೋಟಿ ರೂ. ವ್ಯವಹಾರ ಮಾಡಲಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಮಾತನಾಡಿದರು. ಸಂಘದ ವತಿಯಿಂದ 48 ಮಂದಿ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಸವಣೂರು ಗ್ರಾಪಂ ಸದಸ್ಯ ಗಿರಿಶಂಕರ್ ಸುಲಾಯ, ವಕೀಲ ಬೈತಡ್ಕ ಶೀನಪ್ಪ ಗೌಡ, ಕೃಷ್ಣಕುಮಾರ್ ರೈ ದೇವಸ್ಯ, ಪದ್ಮಯ್ಯ ಗೌಡ ಕರಂದ್ಲಾಜೆ, ಸಂಕಪ್ಪ ರೈ ಕಲಾಯಿ ಸಲಹೆ ಸೂಚನೆ ನೀಡಿದರು. ಕಡಬ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ ಎನ್.ಕುಮಾರಮಂಗಲ, ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್.ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ. ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯನಿರ್ವಹಣಾಧಿಕಾರಿ ಜಲಜಾ ಎಚ್.ರೈ ವರದಿ ವಾಚಿಸಿದರು.

ಸಾಧಕರಿಗೆ ಸನ್ಮಾನ

ರಾಜ್ಯ ಜಾನಪದ ಪ್ರಚಂಡ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಡೊಂಬಯ್ಯ ಕಾಪೆಜಾಲು, ಮಾಸ್ ಸಂಸ್ಥೆಗೆ ಅತಿ ಹೆಚ್ಚು ಅಡಕೆ ಮಾರಾಟ ಮಾಡಿದ ಜಯರಾಮ ರೈ ಪರನೀರು, ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ತಿಮ್ಮಪ್ಪ ಗೌಡ ಮುಂಡಾಳ, ಅಂತಾರಾಷ್ಟ್ರೀಯ ಯೋಗಪಟು ಪ್ರಣಮ್ಯ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net