

ಮಾಗಡಿ: ಸಾವನದುರ್ಗವನ್ನು ವಿಶ್ವ ಪ್ರವಾಸಿ ಕೇಂದ್ರವನ್ನಾಗಿ ಮಾಡುವುದಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲೂಕಿನ ನಾಯ್ಕನಪಾಳ್ಯದ ರೈತ ಭವನದಲ್ಲಿ ಅರಣ್ಯ ಇಲಾಖೆ ಇತ್ತಿಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಚಿರತೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾವನದುರ್ಗವನ್ನು ವಿಶೇಷವಾಗಿ ಅಭಿವೃದ್ದಿಪಡಿಸಲು ಪ್ರಥಮ ಹಂತದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಒಂದು ಕೋಟಿ ರೂ. ಮಂಜೂರು ಮಾಡಿದ್ದು, ಚಾರಣಿಗರು ಬೆಟ್ಟ ಹತ್ತಲು ಹಾಗೂ ಕೆಂಪೇಗೌಡ ವನ್ಯಧಾಮದಲ್ಲಿ ವಾಸಮಾಡಲು ಕಾಲ ಕಳೆಯಲು, ಬೋಟಿಂಗ್ ಮಾಡಲು ಅವಕಾಶ ಕಲ್ಪಿಸುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಬೇಕು. ಈ ಬಗ್ಗೆ ನೀಲಿನಕ್ಷೆ ತಯಾರಿಸಿದರೆ ಸಚಿವರ ಬಳಿ ಚರ್ಚಿಸಿ ಅನುದಾನ ಬಿಡುಗಡೆಮಾಡಿಸಲಾಗುವುದು ಎಂದರು.
ಪರಿಸರ ಮನುಷ್ಯನಿಗೆ ಮುಖ್ಯ. ಮುಂದಿನ ಪೀಳಿಗೆಗೆ ಕಾಡನ್ನು ಉಳಿಸಿ ಪರಿಸರದ ಸಮತೋಲನ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಮಲೆನಾಡಿನಲ್ಲಿ ಹೆಚ್ಚು ಗುಡ್ಡ, ಬೆಟ್ಟ, ಗಿಡ ಮರಗಳಿಂದಾಗಿ ಹೆಚ್ಚು ಮಳೆಯಾಗುವ ವಾತಾವರಣ ಇದೆ. ಅದಕ್ಕಾಗಿ ಹೆಚ್ಚು ಮರ, ಗಿಡಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣ ಮಾಡೋಣ. ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಗೌರವಿಸಿ, ಅವುಗಳ ಭಾವನೆಗಳನ್ನು ಮನುಷ್ಯ ಗೌರವಿಸಬೇಕು. ಅವುಗಳ eತೆಗಿನ ಸಹ ಬಾಳ್ವೆ ಮಾಡುವಂತಹ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ರೂಪಿಸಿದೆ ಎಂದರು.
ತಾಲೂಕಿನ ಪ್ರತಿ ಶಾಲೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪ್ರಾಣಿಗಳ ಬಗ್ಗೆ ಅರಿವು ಮೂಡಿಸಿ, ಚರ್ಚಾ ಸ್ಪರ್ಧೆ ಏರ್ಪಡಿಸಿ ಅದರಲ್ಲೂ ಚಿರತೆ ಬಗ್ಗೆ ವಿಶೇಷವಾಗಿ ಅರಿವು ಮೂಡಿಸಿ ಎಂದು ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ಮರ, ಗಿಡ, ಪ್ರಾಣಿ, ಪಕ್ಷಿಗಳ ಜತೆ ಹೇಗೆ ಬದುಕಬೇಕು ಎಂಬುದರ ಬಗ್ಗೆ ಮಕ್ಕಳಿಗೆ ರಾಜ್ಯದ 56 ವಿಭಾಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಮಾಗಡಿ ತಾಲೂಕು ಚಿರತೆ ವಾಸ ಮಾಡಲು ಸೂಕ್ತ ಪ್ರದೇಶವಾಗಿದೆ. ಇದರಿಂದ ಜನ, ಜಾನುವಾರು ರಕ್ಷಣೆಗೆ ಇಲಾಖೆ ಅರಿವು ಮೂಡಿಸಲಾಗುತ್ತಿದೆ. ಎಂದರು.
ಎಸಿಎಫ್ ಪುಟ್ಟಮ್ಮ, ಗ್ರಾಪಂ ಅಧ್ಯಕ್ಷೆ ಶಿಲ್ಪಾ ಮಲ್ಲಣ್ಣ, ಮಾಜಿ ಅಧ್ಯಕ್ಷ ಜಯಣ್ಣ, ಪಿಡಿಒ ಅಂಜನ್ ಕುಮಾರ್, ಸಂಪನ್ಮೂಲ ವ್ಯಕ್ತಿ ಗುರುಪ್ರಸಾದ್ ಇತರರು ಇದ್ದರು.