

ಎನ್. ವೆಂಕಟೇಶ್ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ 2 ವರ್ಷಗಳಲ್ಲಿ ಅಪಘಾತದಿಂದ ಗಂಭೀರಗೊಂಡಿದ್ದ 8 ಮಂದಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ದುಃಖದಲ್ಲೂ ಇತರರ ಜೀವವನ್ನು ಉಳಿಸಿದ ಕುಟುಂಬಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ, ಬದುಕುಳಿಯುವ ಸಾಧ್ಯತೆ ಇಲ್ಲದಿರುವ ಸಂದರ್ಭದಲ್ಲಿ ಗಾಯಾಳುವಿನ ಕುಟುಂಬಸ್ಥರು ನೋವಿನ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ. ಇದು ಹಲವರ ಬದುಕಿಗೆ ಸಂಜೀವಿನಿಯಾಗಿದ್ದು, ಅನೇಕರ ಜೀವ ಉಳಿದಿದೆ.
ಅಂಗಾಂಗ ದಾನ ಮಹಾತ್ಕಾರ್ಯ
ಅಂಗಾಂಗ ದಾನದ ಮಹತ್ವದ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಈಗಲೂ ಈ ಬಗ್ಗೆ ಜನರಲ್ಲಿರುವ ಮೂಢನಂಬಿಕೆ ದೂರವಾಗಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕರು ಸತ್ತ ಬಳಿಕ ಮೃತದೇಹವನ್ನು ಆಸ್ಪತ್ರೆಗಳಿಗೆ ದಾನ ಮಾಡುವ ನಿರ್ಣಯಕ್ಕೆ ಬದುಕಿದ್ದಾಗಲೇ ಒಪ್ಪಿಗೆ ಸೂಚಿಸುತ್ತಿದ್ದಾರೆ. ಮತ್ತೊಂದೆಡೆ ಕೋಮಾದಲ್ಲಿರುವವರ ಅಂಗಾಂಗಗಳನ್ನು ವೈದ್ಯರು ದೃಢಪಡಿಸಿದ ಬಳಿಕ ದು:ಖದ ನಡುವೆಯೂ ಸಂಬಂಧಿಕರು ದಾನ ಮಾಡಲು ಮುಂದಾಗುತ್ತಿದ್ದಾರೆ.
ಸಾವಿನ ಬಳಿಕ ಒಬ್ಬ ವ್ಯಕ್ತಿಯ ಕಾರ್ನಿಯಾ, ಹೃದಯ ಕವಾಟ, ಚರ್ಮ, ಮೂಳೆ ಮಜ್ಜೆ, ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಮೇಧೋಜೀರಕ ಗ್ರಂಥಿ, ಸಣ್ಣ ಕರುಳು ದಾನದ ಮೂಲಕ ಕನಿಷ್ಠ 8 ಜನರ ಜೀವ ಉಳಿಸಬಹುದಾಗಿದೆ.
ಜಿಲ್ಲೆಯ ದಾನಿಗಳು
ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯ ಡಿ. ಪೃಥ್ವಿರಾಜ್ (19) ಎಂಎಸ್‌ಆರ್ ಆಸ್ಪತ್ರೆಯಲ್ಲಿ ಹೃದಯ, ಲಿವರ್, ಕಿಡ್ನಿ, ಕಣ್ಣುಗಳನ್ನು, ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯದ ನರಸಿಂಹಮೂರ್ತಿ (42) ಟ್ರಾಮಾ ಕೇರ್ ಆಸ್ಪತ್ರೆಯಲ್ಲಿ ಲಿವರ್, ಕಣ್ಣು ಮತ್ತು ವಾಲ್ವಸ್, ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿಯ ವೆಂಕಟಲಕ್ಷ್ಮಮ (52) ಸಿಎಂಐ ಆಸ್ಪತ್ರೆಯಲ್ಲಿ ಲಿವರ್, ಕಿಡ್ನಿ, ಹೃದಯ ಮತ್ತು ವಾಲ್ವಸ್, ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರಹಳ್ಳಿಯ ಅನಿಲ್ ಕುಮಾರ್ (31) ಐಜಿಒಟಿ ಕೇಂದ್ರದಲ್ಲಿ ಲಿವರ್, ಹೃದಯ, ವಾಲ್ವಸ್ ಮತ್ತು ಕಣ್ಣುಗಳು, ಗೌರಿಬಿದನೂರು ತಾಲೂಕಿನ ಕಲ್ಲೂಡಿಯ ನಾಗಾರ್ಜುನ (21) ಆರ್.ವಿ.ಆಸ್ಪತ್ರೆಯಲ್ಲಿ ಹೃದಯ, ಕಿಡ್ನಿ, ಲಿವರ್ ಮತ್ತು ಕಣ್ಣುಗಳನ್ನು, ಚಿಕ್ಕಬಳ್ಳಾಪುರದ ಅಶ್ವತ್ಥಪ್ಪ (24) ಬಿಜಿಎಸ್ ಆಸ್ಪತ್ರೆಯಲ್ಲಿ ಲಿವರ್, ಕಿಡ್ನಿ ಮತ್ತು ಪ್ಯಾಂಕ್ರಿಯಾಸ್, ಚಿಕ್ಕಬಳ್ಳಾಪುರದ ಲಕ್ಷ್ಮೀಕಾಂತ್ (23) ಸ್ಪರ್ಶ್ ಆಸ್ಪತ್ರೆಯಲ್ಲಿ ಹೃದಯ, ಲಿವರ್, ಶಾಸ್ವಕೋಶ, ಕಿಡ್ನಿ ಮತ್ತು ಕಣ್ಣುಗಳನ್ನು, ಚಿಕ್ಕಬಳ್ಳಾಪುರದ ಮುರಳಿ ಕೃಷ್ಣ (36) ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಹೃದಯ, ಲಿವರ್ ಮತ್ತು ಕಿಡ್ನಿಗಳನ್ನು ದಾನ ಮಾಡಿದ್ದಾರೆ.
ಜಿಲ್ಲಾಡಳಿತದ ಗೌರವ
ಕುಟುಂಬದ ವ್ಯಕ್ತಿಯನ್ನು ಕಳೆದುಕೊಳ್ಳುತ್ತಿರುವ ನೋವಿನಲ್ಲೂ ಅಂಗಾಂಗ ದಾನದ ನಿರ್ಣಯವನ್ನು ಕೈಗೊಂಡ ದಾನಿಯ ಕುಟುಂಬಸ್ಥರಿಗೆ ಅಭಿನಂದನಾ ಪತ್ರ ಸಲ್ಲಿಸುವುದರ ಜತೆಗೆ ಸನ್ಮಾನಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ದಾನಿಗಳ ಕುಟುಂಬಸ್ಥರನ್ನು ಸನ್ಮಾನಿಸಿದರು.
ಅಂಗಾಂಗ ದಾನವು ಪುಣ್ಯದ ಕೆಲಸ. ಇದರ ಬಗ್ಗೆ ಆರೋಗ್ಯವಂತರು ತಿಳಿದುಕೊಂಡು ನಿಯಮಾನುಸಾರ ದಾನಕ್ಕೆ ಮುಂದಾದಲ್ಲಿ ಅನೇಕರ ಜೀವ ಉಳಿಯುತ್ತದೆ. ಇದರ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಿ, ಪ್ರೋತ್ಸಾಹಿಸಬೇಕಾಗಿದೆ.ಡಾ. ನರಸಿಂಹಮೂರ್ತಿ, ವೈದ್ಯ, ಚಿಕ್ಕಬಳ್ಳಾಪುರ