

ಕೆ.ಆರ್.ಪೇಟೆ: ಪಟ್ಟಣದ ಪುರಸಭೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೌಭಾಗ್ಯಾ ಚುನಾಯಿತರಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸೌಭಾಗ್ಯಾ, ಜೆಡಿಎಸ್‌ನಿಂದ ಕಲ್ಪನಾ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಸೌಭಾಗ್ಯ ಪರವಾಗಿ ಒಬ್ಬ ಪಕ್ಷೇತರ ಹಾಗೂ ಮೂವರು ಜೆಡಿಎಸ್ ಸೇರಿದಂತೆ 9 ಕಾಂಗ್ರೆಸ್ ಸೇರಿ 13 ಸದಸ್ಯರು ಕೈ ಎತ್ತುವ ಮೂಲಕ ಮತ ಚಲಾಯಿಸಿದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಲ್ಪನಾ ಪರ ಶಾಸಕ ಎಚ್.ಟಿ.ಮಂಜು, ಜೆಡಿಎಸ್‌ನ 10 ಸದಸ್ಯರು ಸೇರಿ 11 ಮತ ಚಲಾಯಿಸಿದರು. ಎರಡು ಮತಗಳ ಅಂತರದಿಂದ ಸೌಭಾಗ್ಯಾ ಚುನಾಯಿತರಾದರು. ಮತದಾನದ ಹಕ್ಕು ಹೊಂದಿದ್ದ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೈರಾಗಿದ್ದರು.
ಶಾಸಕರ ಬೆಂಬಲಿಗರಾದ ಹೊಸಹೊಳಲು ಅಶೋಕ್, ಇಂದ್ರಾಣಿ ವಿಶ್ವನಾಥ್ ಹಾಗೂ ಪದ್ಮಾರಾಜು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕರ ಎದುರೇ ಅಡ್ಡ ಮತದಾನ ಮಾಡಿದರು. ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಶಾಮಿಯಾನ ತಿಮ್ಮೆಗೌಡ ಕಾಂಗ್ರೆಸ್ ಪರವಾಗಿ ಮತ ಹಾಕಿದರು. ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಶಾಸಕ ನಿರ್ಗಮಿಸಿದರು.
ಅಧ್ಯಕ್ಷ ಸ್ಥಾನದ ಮೀಸಲು ಪ್ರಶ್ನಿಸಿ ವರಿಷ್ಠರ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಹೈಕೋರ್ಟ್‌ನಲ್ಲಿ ಅಧ್ಯಕ್ಷರ ಚುನಾವಣೆಗೆ ತಡೆ ತಂದಿದ್ದ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಸಿ.ಮಂಜುನಾಥ್ ಕಾಂಗ್ರೆಸ್ ಪರ ಮತ ಚಲಾಯಿಸಿದರು. ಅಭ್ಯರ್ಥಿ ಆಯ್ಕೆಯಿಂದ ಅಸಮಾಧಾನಿತ ಕಾಂಗ್ರೆಸ್ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್‌ರನ್ನು ಶಾಸಕ ನರೇಂದ್ರ ಮನವೊಲಿಸಿದರಿಂದ ಕಾಂಗ್ರೆಸ್‌ಗೆ ಮತ ಚಲಾಯಿಸಿದರು. ಕಾಂಗ್ರೆಸ್‌ನಲ್ಲಿದ್ದ ಬಂಡಾಯವನ್ನು ಮತದಾನಕ್ಕೂ ಪೂರ್ವ ಕೈ ವರಿಷ್ಠರು ಶಮನಗೊಳಿಸುವಲ್ಲಿ ಯಶಸ್ವಿಯಾದರು.
ತಹಸೀಲ್ದಾರ್ ಆದರ್ಶ ಚುನಾವಣಾಧಿಕಾರಿಯಾಗಿ, ಚುನಾವಣಾ ಸಹಾಯಕರಾಗಿ ಪುರಸಭೆ ಮುಖ್ಯಾಧಿಕಾರಿ ರಾಜು ಕೆ.ವಠಾರ ಹಾಗೂ ಚುನಾವಣೆ ಶಾಖೆ ಶಿರಸ್ತೇದಾರ್ ಹರೀಶ್ ಕಾರ್ಯ ನಿರ್ವಹಿಸಿದರು.
ಕಾಂಗ್ರೆಸ್ ಸಂಭ್ರಮಾಚರಣೆ: ಕಾಂಗ್ರೆಸ್ ಅಭ್ಯರ್ಥಿ ಸೌಭಾಗ್ಯ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಸಂಭ್ರಮಾಚರಿಸಿದರು. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಕಾಂಗ್ರೆಸ್ ನಾಯಕ ಬಿ.ಎಲ್.ದೇವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ನಾಗೇಂದ್ರಕುಮಾರ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿಪಂ ಮಾಜಿ ಸದಸ್ಯ ಕೊಡಿಮಾರನಹಳ್ಳಿ ದೇವರಾಜು ಇದ್ದರು.