

ಮಂಡ್ಯ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಹಾಗೂ ಅಲ್ಲಿನ ಮಾಜಿ ಉಪ ಮುಖ್ಯಮಂತ್ರಿ ಶಶಿಕಲಾ ನಟರಾಜನ್ ಅವರು ಮಂಡ್ಯ ಬಳಿಯ ನಿಮಿಷಾಂಬಾ ದೇವಸ್ಥಾನದಲ್ಲಿ ಹರಕೆ ತೀರಿಸಿದ್ದಾರೆ.
ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ನಟರಾಜನ್, ಮೂರು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ನಿಮಿಷಾಂಬಾ ದೇವಸ್ಥಾನಕ್ಕೆ ಬಂದಿದ್ದಾಗ ಹರಕೆ ಹೇಳಿಕೊಂಡಿದ್ದರು.
ಇಂದು ಅವರು ಕುಟುಂಬಸಮೇತರಾಗಿ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ ಹಳೆಯ ಹರಕೆಯನ್ನು ಕೂಡ ತೀರಿಸಿದ್ದಾರೆ. ಹರಕೆ ತೀರಿಸಲು ಕುಟುಂಬಸಮೇತರಾಗಿ ಬಂದ ಅವರನ್ನು ದೇವಾಲಯದ ಅರ್ಚಕರು ವಿಶೇಷವಾಗಿ ಬರಮಾಡಿಕೊಂಡರು.
ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಪಡೆಯಲು ಜೈಲು ಅಧಿಕಾರಿಗಳಿಗೆ 2 ಕೋಟಿ ರೂ. ಲಂಚ ಕೊಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತಮಿಳುನಾಡಿನ ಎಐಎಡಿಂಕೆ ನಾಯಕಿ ಶಶಿಕಲಾ ನಟರಾಜನ್ ಮತ್ತು ಅವರ ಆಪ್ತೆ ಇಳವರಸಿಗೆ ಎಸಿಬಿ ಇಂದು ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.