

ಕುಂದಾಪುರ: ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದು, ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳಿವೆ. ಮಹಿಳೆಯರು ಶಿಕ್ಷಣದ ಜತೆಗೆ ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಉನ್ನತ ಗೌರವದಿಂದ ಬದುಕಲು ಸಾಧ್ಯ ಎಂದು ಕುಂದಾಪುರ ನಿವೃತ್ತ ಮುಖ್ಯ ಶಿಕ್ಷಕಿ ಶಶಿಕಲಾ ಬಿಜೂರು ಹೇಳಿದರು.
ಕುಂದಾಪುರ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸಾ ಕೋಶ, ಮಹಿಳಾ ವೇದಿಕೆ, ಎನ್ನೆಸ್ಸೆಸ್ ಘಟಕ 1 ಮತ್ತು 2ರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕಾಲೇಜಿನಲ್ಲಿ ಗುರುವಾರ ಆಚರಿಸಲಾಯಿತು.
ಪ್ರಾಂಶುಪಾಲ ರಾಮರಾಯ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಾಧಕಿಯರಾದ ಕುಂದಾಪುರದ ಆಟೋ ಚಾಲಕಿ ದೀಪಾ, ರೂಪಾ, ಸುಲೋಚನಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜು ಆಂತರಿಕ ಗುಣಮಟ್ಟ ಭರವಸ ಕೋಶ ಸಂಚಾಲಕ ನಾಗರಾಜ ಯು., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ನಿರಂಜನ ಶರ್ಮ, ಮಹಿಳಾ ವೇದಿಕೆ ವಿದ್ಯಾರ್ಥಿ ಪ್ರತಿನಿಧಿಗಳಾದ ರಚನಾ, ದಿವ್ಯಶ್ರೀ ಉಪಸ್ಥಿತರಿದ್ದರು. ಮಹಿಳಾ ವೇದಿಕೆ ಸಂಚಾಲಕಿ ರೋಹಿಣಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಮೃತಾ ವಂದಿಸಿದರು. ವಿದ್ಯಾರ್ಥಿನಿ ಚೈತನ್ಯಾ ಕಾರ್ಯಕ್ರಮ ನಿರೂಪಿಸಿದರು.