

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪಂಚಾಯಿತಿ ವತಿಯಿಂದ ಮನೆಗಳಿಗೆ ಪೂರೈಸುತ್ತಿರುವ ನಲ್ಲಿ ನೀರು ದುರ್ವಾಸನೆಯಿಂದ ಕೂಡಿದ್ದು, ಈ ನೀರು ಕುಡಿದರೆ ಗ್ರಾಮಸ್ಥರು ಅಸ್ವಸ್ಥರಾಗುವುದು ಖಚಿತ ಎಂದು ತಲ್ಲೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತಲ್ಲೂರು ಗ್ರಾಪಂ ವತಿಯಿಂದ ನಡೆದ ಎರಡನೇ ಸುತ್ತಿನ ಗ್ರಾಮಸಭೆಯಲ್ಲಿ ನೀರಿನ ಗುಣಮಟ್ಟ ಕುರಿತು ವೆಂಕಟ್, ವಿಜಯೇಂದ್ರ, ಸಂತೋಷ್, ಗೀತಾ, ರಮೇಶ್ ಪ್ರಶ್ನಿಸಿದ್ದು, ಕೋಟೆಬಾಗಿಲು, ಉಪ್ಪಿನಕುದ್ರು, ಸಬ್ಲಾಡಿ ಸಹಿತ ಹಲವು ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಬರಾಜಾಗುತ್ತಿರುವ ನೀರು ಕೆಟ್ಟ ವಾಸನೆ ಹೊಂದಿದೆ. ಸಾರ್ವಜನಿಕ ನೀರಿನ ಟ್ಯಾಂಕ್ ಸ್ವಚ್ಛಗೊಳ್ಳುತ್ತಿಲ್ಲ ಎಂದರು.
ಅಧ್ಯಕ್ಷ ಗಿರೀಶ್ ಎಸ್.ನಾಯ್ಕ ಪ್ರತಿಕ್ರಿಯಿಸಿ, ಶುದ್ಧ ನೀರು ಪೂರೈಸುವುದು ನಮ್ಮ ಆದ್ಯತೆಯಾಗಿದ್ದು, ಆದರೆ ತಳಮಟ್ಟಕ್ಕೆ ನೀರು ತಲುಪಿರುವುದರಿಂದ ಅನಿವಾರ್ಯವಾಗಿ ನಾವು ಅದೇ ನೀರು ಪೂರೈಸುತ್ತಿದ್ದೇವೆ. ಮೂರು ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದೇವೆ. ಜೆಜೆಎಂ ಪೈಪ್ಲೈನ್ ಕಾಮಗಾರಿ ಒಂದು ಹಂತದ್ದು ಪೂರ್ಣಗೊಂಡಿದ್ದು, ಪರೀಕ್ಷೆ ನಡೆಸಿ ನೀರು ಸರಬರಾಜುಗೊಳಿಸಲು ವಾರಾಹಿ ನಿಗಮಕ್ಕೆ ಸೂಚಿಸಲಾಗಿದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದರು.
ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಮಿತಾ ಮಾತನಾಡಿ, ದಿನಗಳೆದಂತೆ ಬಿಸಿ ವಾತಾವರಣ ಹೆಚ್ಚುತ್ತಿದ್ದು, ಆರೋಗ್ಯದ ಕಡೆಗೆ ಜನರು ಗರಿಷ್ಠ ಗಮನ ನೀಡಬೇಕು. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚು ಕಾಯ್ದುಕೊಳ್ಳಬೇಕಿದ್ದು, ಬಿಸಿ ಮಾಡಿ ಆರಿಸಿದ ನೀರು ಕುಡಿಯವುದು ಉತ್ತಮ ಎಂದರು. ಶಿಕ್ಷಣ ಸಂಯೋಜಕ ಯೋಗೀಶ್, ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಕುರಿತಂತೆ ಮಾಹಿತಿ ನೀಡಿದರು. ಮೀನುಗಾರಿಕಾ ಇಲಾಖೆಯ ಮಹಾದೇವ್ ನೋಡಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ನಾಗರತ್ನ ಹಿಂದಿನ ಸಭೆಯ ನಡಾವಳಿ ಓದಿದರು. ಕಾರ್ಯದರ್ಶಿ ರತ್ನಾ ವಾರ್ಡ್ ಸಭೆಯ ನಿರ್ಣಯ ಮಂಡಿಸಿದರು.
ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಬಾಕಿ ಆಗಿರುವ ಕಾಮಗಾರಿಗಳ ಮಾಹಿತಿ ಕೇಳಿದ್ದೆ. ಕಳೆದ ಬಾರಿ ಸಬ್ಲಾಡಿ ಭಾಗದ ರಸ್ತೆಗೆ ಹೆಂಚಿನ ಹುಡಿ ಹಾಕಲು ಮನವಿ ಮಾಡಿದ್ದೆ. ಯಾವುದನ್ನೂ ಮಾಡಿಲ್ಲ ಎಂದು ಕರಣ್ ಪೂಜಾರಿ ಆರೋಪಿಸಿದರು. ಚಂದ್ರಮ ತಲ್ಲೂರು ದನಿಗೂಡಿಸಿ, ತಲ್ಲೂರು ಗ್ರಾಪಂ ದೂರದ ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೊಳಪಟ್ಟಿದ್ದು, ಇದು ಇಲ್ಲಿನ ಗ್ರಾಮಸ್ಥರಿಗೆ ಕಷ್ಟವಾಗುತ್ತಿದೆ. ಆದರೆ ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ತಲ್ಲೂರಿಗೆ ಸಮೀಪವಿದ್ದು, ಇಲ್ಲಿಗೆ ವಿಲೀನಗೊಳಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಕೋಟೆಬಾಗಿಲು ಕಿ.ಪ್ರಾ ಶಾಲೆಯ ಮಕ್ಕಳನ್ನು ತಲ್ಲೂರು ಶಾಲೆಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಶಾಲೆಯನ್ನು ಮುಚ್ಚಿಸುವ ಷಡ್ಯಂತ್ರವಾಗಿದೆ. ಆದರೆ ಶಿಕ್ಷಣ ಇಲಾಖೆ ಇದಕ್ಕೆ ಆಸ್ಪದ ನೀಡಬಾರದು ಎಂದು ಚಂದ್ರಮ ತಲ್ಲೂರು ಪಟ್ಟು ಹಿಡಿದರು. ಈ ಕುರಿತು ತಲ್ಲೂರು ಗ್ರಾ.ಪಂ ವತಿಯಿಂದ ನೋಟಿಸ್ ನೀಡಲು ಸೂಚಿಸಲಾಯಿತು.
* ನೀರಿನ ಮಟ್ಟ ಕಾಯ್ದುಕೊಳ್ಳುವಂತೆ ವೈದ್ಯರಿಂದ ಸೂಚನೆ* ವಿವಿಧ ಇಲಾಖಾಧಿಕಾರಿಗಳಿಂದ ಮಾಹಿತಿ