ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ಆಚರಣೆ

16 NMG 02
Published on

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ವಿಶೇಷ ಪೂಜೆ, ಹೋಮ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.


ಪ್ರತಿನಿತ್ಯ ರಾತ್ರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಿಂಹಾಸನ ಪೂಜೆ ನಡೆಸಿದ ನಂತರ ಷೋಡಶೋಪಚಾರ ಪೂಜೆಯನ್ನು ಮಠದ ವಟುಗಳು ನೆರೆವೇರಿಸಲಿದ್ದಾರೆ. ಮೊದಲ ದಿನವಾದ ಭಾನುವಾರ ರಾತ್ರಿ ಶ್ರೀಗಳ ಸಿಂಹಾಸನ ಪೂಜೆ ನೆರವೇರಿತು. ನಂತರ ವಟುಗಳಿಂದ ಸರ್ವಾಲಂಕೃತಗೊಂಡ ಶ್ರೀಗಳಿಗೆ ಚಿನ್ನದ ಕಿರೀಟಧಾರಣೆ, ಚಿನ್ನಲೇಪಿತ ಶಾಲುಗಳನ್ನು ಧರಿಸಿ ಗುರುಪೀಠದಲ್ಲಿ ಕೂರಿಸಿ ಷೋಡೋಶೋಪಚಾರ ಪೂಜೆ ಸಲ್ಲಿಸಲಾಯಿತು. ನಂತರ ಶ್ರೀಗಳು ಆಶೀರ್ವಚನ ನೀಡಿದರು.


ಬಾಗಿನ ವಿತರಣೆ:
ಗುರುಭವನದಲ್ಲಿ ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಹಿಳೆಯರಿಗೆ ಬಾಗಿನ ವಿತರಿಸಿದರು.


ಬಳಿಕ ಮಾತನಾಡಿದ ಶ್ರೀಗಳು, ಮಹಿಳೆಯರಿಗೆ ಆದಿಚುಂಚನಗಿರಿ ಮಠ ತವರು ಮನೆಯಿದ್ದಂತೆ. ಕ್ಷೇತ್ರಕ್ಕೆ ಬರುವ ಹಲವು ಮಹಿಳೆಯರಿಗೆ ಶ್ರೀಮಠ ತವರು ಮನೆಯನ್ನು ನೆನಪಿಸುತ್ತದೆ. ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ಪ್ರತಿವರ್ಷ ಕ್ಷೇತ್ರಕ್ಕೆ ಆಗಮಿಸಿ ಮಹಿಳೆಯರಿಗೆ ಬಾಗಿನ ಕೊಡುವ ಕಾರ್ಯ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.


ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಸತ್‌ಕೀರ್ತಿ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಭಾರತಿ ಶಂಕರ್, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net