

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಪೊಲೀಸರು ರಕ್ಷಣಾ ಕಾರ್ಯ, ಬಂದೋಬಸ್ತ್, ಸಂಚಾರ ನಿಮಯ ಪಾಲನೆ, ಕಳ್ಳತನ, ಕೊಲೆ ಪ್ರಕರಣ ಭೇದಿಸುವುದರಲ್ಲಿಯೇ ಬ್ಯೂಸಿ ಆಗಿರುತ್ತಾರೆ. ಆದರೆ, ತಾಲೂಕಿನ ಹಲಗೇರಿ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಹೊರಟಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 52 ಗ್ರಾಮಗಳು ಬರುತ್ತವೆ. ಈಗಾಗಲೇ ಬೆನಕನಕೊಂಡ ಗ್ರಾಮವನ್ನು ಸಾರಾಯಿ ಮುಕ್ತ ಎಂದು ಘೊಷಿಸಿ ನಾಮಫಲಕವನ್ನೂ ಪೊಲೀಸರು ಅಳವಡಿಸಿದ್ದಾರೆ. ಇನ್ನುಳಿದ ಗ್ರಾಮಗಳನ್ನೂ ಸಾರಾಯಿ ಮುಕ್ತ ವ್ಯಾಪ್ತಿಗೆ ತರಲು ಮುಂದಾಗಿದ್ದಾರೆ. ಆಯಾ ಗ್ರಾಮದ ಬೀಟ್ ಪೊಲೀಸರ ಮೂಲಕ ರಾತ್ರಿ ಸಮಯದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಮದ್ಯ ಸೇವನೆಯ ದುಷ್ಪರಿಣಾಮ ಮತ್ತು ಅದರಿಂದಾಗುವ ಕೌಟುಂಬಿಕ ಕಲಹಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಇದಕ್ಕಾಗಿ ಐದು ಹಂತದ ಕಾರ್ಯಾಚರಣೆ ಹಾಕಿಕೊಂಡಿದ್ದಾರೆ.
ಮೊದಲನೇ ಹಂತದಲ್ಲಿ ‘ಸಾರಾಯಿ ಮುಕ್ತ ಗ್ರಾಮದತ್ತ ಒಂದು ಹೆಜ್ಜೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಗ್ರಾಮದಲ್ಲಿ ಏರ್ಪಡಿಸಿ, ಮದ್ಯ ವ್ಯಸನಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಪಟ್ಟಿ ಸಿದ್ಧ ಮಾಡುವುದು.
2ನೇ ಹಂತದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುವವರನ್ನು ಠಾಣೆಗೆ ಕರೆಯಿಸಿ ಅವರ ಮನಪರಿವರ್ತನೆ ಮಾಡುವುದು. ಅಕ್ರಮ ಮದ್ಯ ಮಾರಾಟದ ಪ್ರಕರಣ ದಾಖಲಿಸಿದರೆ, ಮುಂದಾಗುವ ತೊಂದರೆ ಕುರಿತು ಅವರಿಗೆ ತಿಳಿ ಹೇಳುವುದು. ಕಾನೂನು ಅರಿವು ಮೂಡಿಸಿ, ಅಕ್ರಮ ಮದ್ಯ ಮಾರಾಟ ಕೈ ಬಿಡುವಂತೆ ಸೂಚನೆ ನೀಡುವುದು.
3ನೇ ಹಂತದಲ್ಲಿ ಗ್ರಾಮಕ್ಕೆ ಭೇಟಿ ನೀಡಿ, ತಿಳಿ ಹೇಳಿದ ಮೇಲೂ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ಗುಪ್ತ ಮಾಹಿತಿ ಸಂಗ್ರಹಿಸುವುದು. ಒಂದು ವೇಳೆ ಅಕ್ರಮ ಮಾರಾಟ ಮಾಡುವುದು ಕಂಡು ಬಂದಲ್ಲಿ ಅವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದು.
4ನೇ ಹಂತದಲ್ಲಿ ಸಂಪೂರ್ಣ ಗ್ರಾಮವು ಸಾರಾಯಿ ಮುಕ್ತಗೊಂಡ ಬಳಿಕ ಗ್ರಾಪಂ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿ ಅಕ್ರಮ ಸಾರಾಯಿ ಮಾರಾಟ ಬಿಟ್ಟಿರುವವರನ್ನು ಗಣ್ಯರಿಂದ, ಸ್ವಾಮೀಜಿಯವರಿಂದ ಸನ್ಮಾನಿಸುವುದು. ಬಿಡದೇ ಇದ್ದವರನ್ನು ದೂರು ದಾಖಲಿಸಿ, ಜೈಲಿಗೆ ಕಳುಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
52 ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ಹಾಕಿಕೊಂಡಿದ್ದಾರೆ. ಜ. 1ರಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು, ತಿಂಗಳ ಕೊನೆಗೆ ಮುಗಿಯಲಿದೆ. ಪೊಲೀಸರು ಅಂದುಕೊಂಡಂತೆ ನಡೆದರೆ, 52 ಗ್ರಾಮಗಳು ಸಾರಾಯಿ ಮುಕ್ತವಾಗಲಿವೆ.
ಬೆಳಕು ಚೆಲ್ಲಿದ್ದ ‘ವಿಜಯವಾಣಿ’: ಹಲಗೇರಿ ಗ್ರಾಮ ವ್ಯಾಪ್ತಿಯಲ್ಲಿ ಬಾಳೆಹಣ್ಣಿನ ಅಂಗಡಿ ಸೇರಿ ವಿವಿಧೆಡೆ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಮಹಿಳೆಯರಿಗೆ ಜೀವನ ನಡೆಸುವುದೇ ದುಸ್ತರವಾಗಿತ್ತು. ಈ ಕುರಿತು ‘ವಿಜಯವಾಣಿ’ ಡಿ. 23ರಂದು ‘ಹಣ್ಣಿನ ಅಂಗಡಿಯಲ್ಲೂ ಮದ್ಯ..!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಪೊಲೀಸರು ಸಾರಾಯಿ ಮುಕ್ತ ಗ್ರಾಮ ಮಾಡಲು ಮುಂದಾಗಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಬೆನಕನಕೊಂಡ ಗ್ರಾಮದ ಮಹಿಳೆಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಗ್ರಾಪಂಗಳ ಸಹಯೋಗದೊಂದಿಗೆ ಗ್ರಾಮೀಣ ಭಾಗವನ್ನು ಸಾರಾಯಿ ಮುಕ್ತ ಗ್ರಾಮ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಜನತೆ ಇದಕ್ಕೆ ಸ್ಪಂದಿಸಬೇಕು. | ಶ್ರೀ ವೀರಭದ್ರ ಸ್ವಾಮೀಜಿ, ಲಿಂಗದಹಳ್ಳಿ ಹಿರೇಮಠ ಹಲಗೇರಿ ಠಾಣೆ ವ್ಯಾಪ್ತಿಯ 52 ಗ್ರಾಮಗಳಲ್ಲಿಯೂ ಮದ್ಯ ಮಾರಾಟ ಕೈ ಬಿಡುವ ಕುರಿತು ಎಲ್ಲರಿಗೂ ಸೂಚಿಸಲಾಗಿದೆ. ನಿತ್ಯ ರಾತ್ರಿ ಗ್ರಾಮಗಳಿಗೆ ತೆರಳಿ ಈಗಾಗಲೇ 1, 2ನೇ ಹಂತದ ಜಾಗೃತಿ ಮೂಡಿಸಿದ್ದೇವೆ. 3 ಮತ್ತು 4ನೇ ಹಂತ ಬಾಕಿಯಿದ್ದು, ಬೆನಕನಕೊಂಡ ಮಾದರಿಯಲ್ಲಿ ಎಲ್ಲ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲಾಗುವುದು. | ಸಿದ್ಧಾರೂಢ ಬಡಿಗೇರ, ಹಲಗೇರಿ ಠಾಣೆ ಪಿಎಸ್ಐ