

ಸರಗೂರು: ಪಟ್ಟಣದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಹಲವು ವರ್ಷಗಳಿಂದ ಇಲಾಖೆಯಿಂದ ಸೌಲಭ್ಯ ಸಿಗುತ್ತಿಲ್ಲ. ಅಧಿಕಾರಿಗಳು ಕಾರ್ಮಿಕರನ್ನು ಕಚೇರಿಗೆ ಅಲೆದಾಡಿಸುತ್ತಿರುವ ಬಗ್ಗೆ ಹಾಗೂ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕ್ರಮ ವಹಿಸಬೇಕು ಎಂದು ಪ್ರಭಾರ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪುಟ್ಟಹನುಮಯ್ಯ ಮನವಿ ಮಾಡಿದರು.
ಪಟ್ಟಣದ ಕಟ್ಟಡ ಕಾರ್ಮಿಕ ಸಂಘದ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕ ಸಂಘದಲ್ಲಿ 200ರಿಂದ 300 ಸದಸ್ಯರು ಇದ್ದು, ಸರ್ಕಾರಿ ಸೌಲಭ್ಯಗಳು ಇಲ್ಲಿವರೆಗೂ ಸಿಕ್ಕಿಲ್ಲ. ಕಾರ್ಮಿಕರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ. ಕಟ್ಟಡ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಶಿವರಾಜು ಮಾತನಾಡಿ, ಲ್ಯಾಪ್‌ಟಾಪ್ ಸೇರಿದಂತೆ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಉಳ್ಳವರ ಮಕ್ಕಳಿಗೆ ಮಧ್ಯವರ್ತಿಗಳ ಮೂಲಕ ನೀಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಕಾರ್ಮಿಕ ನಿರೀಕ್ಷಕಿ ಜಯಶೀಲಾ ಮಾತನಾಡಿ, ಲ್ಯಾಪ್‌ಟಾಪ್ ವಿತರಣೆ ಬಗ್ಗೆ ಸರ್ವೇ ಮಾಡಲಾಗುತ್ತಿದೆ. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ 13000 ಸಾವಿರ ಕಾರ್ಮಿಕರ ಕಾರ್ಡ್‌ಗಳಿವೆ. ಹೀಗಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ರಾಚಯ್ಯ, ಕಾರ್ಯದರ್ಶಿ ಬಸವರಾಜು, ಖಜಾಂಚಿ ಆದಿಶೇಷ, ರಮೇಶ್, ಬೋಗಯ್ಯ, ಕಾರ್ಯನಿರ್ವಾಹಕ ಸಿದ್ದಪ್ಪ, ಸದಸ್ಯರಾದ ನಂಜುಂಡಶೆಟ್ಟಿ, ಸತೀಶ್‌ಕುಮಾರ್, ತಂಗವೇಲು, ಜಬ್ಬಾರ್, ಎಸ್.ಕೆ.ರಾಜಣ್ಣ, ನಾಗರಾಜು, ಮಹಾದೇವ, ಕಾರ್ಮಿಕ ಇಲಾಖೆ ಸಿಬ್ಬಂದಿ ಪರಶಿವ, ಸರಿತಾ ಇತರರು ಇದ್ದರು.