

ಬೆಂಗಳೂರು; ಮಕ್ಕಳಿಗೆ ಮನೆಯಲ್ಲಿ ಕನ್ನಡ ಕಲಿಸದಿದ್ದರೆ ಕನ್ನಡದ ಬೇರು ಮುದುಡಿ ಹೋಗುತ್ತದೆ. ಹಾಗಾಗಿ ನಾಡಿನ ಎಲ್ಲ ತಾಯಂದಿರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿಯೇ ಮಾತನಾಡಿ ಕನ್ನಡ ಭಾಷೆಯನ್ನು ಕಲಿಸಿ ಎಂದು ರಾಜ್ಯಸಭಾ ಸದಸ್ಯೆ ಡಾ. ಸುಧಾ ಮೂರ್ತಿ ಕರೆ ನೀಡಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಸಪ್ನ ಬುಕ್ ಹೌಸ್ ಹೊರತಂದಿರುವ 69 ಲೇಖಕರ 69 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕಳೆದುಕೊಳ್ಳುವುದು ಸುಲಭ. ಆದರೆ ನಾವು ನಮ್ಮ ಭಾಷೆಯನ್ನು ಉಳಿಸಿದರೆ ಇನ್ನೂ ಎರಡು ಸಾವಿರ ವರ್ಷಗಳು ನಮ್ಮ ಭಾಷೆ ಪ್ರಕಾಶಿಸಲಿದೆ. ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಸಾಮಾರ್ಜ್ಯದ ಅರಸರು, ಮೈಸೂರು ಒಡೆಯರು, ವೀರರಾಣಿಯರು, ವಿದ್ವಾಂಸರಿಗೆ ಕನ್ನಡ ಮೂಲ ಬೇರಾಗಿತ್ತು. ವಿದ್ವತ್ತು ಯಾರ ಮನೆಯ ಸ್ವತ್ತಲ್ಲ. ಹಾಗಾಗಿ ಕನ್ನಡವನ್ನು ಕೇವಲ ಮಾತನಾಡುವ ಭಾಷೆಯನ್ನಾಗಿ ಮಾಡದೆ, ಬಳಕೆಯ ಭಾಷೆಯನ್ನಾಗಿ ಬೆಳೆಸುವ ಪಣತೊಡಬೇಕು ಎಂದರು.
ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಟಕೇಶ್ ಮಾತನಾಡಿ, ರಾಜ್ಯದ ವಿವಿಧ ಭಾಗದ ಲೇಖಕರು, ಸಾಹಿತಿಗಳು ಬರೆದಿರುವ 69 ಪುಸ್ತಕಗಳು ವೈವಿಧ್ಯತೆಯಿಂದ ಕೂಡಿದ್ದು, ಇವುಗಳಲ್ಲಿ ಅತೀ ಹೆಚ್ಚು ಕಾದಂಬರಿ ಹಾಗು ಮಕ್ಕಳ ಸಾಹಿತ್ಯ ಕೃತಿಗಳಿವೆ. ಇವುಗಳ ಹೊರತಾಗಿ ವಿಮರ್ಶೆ, ಸಂಶೋಧನಾ, ಇಂಗ್ಲಿಷ್, ಮರಾಠಿ, ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡಿರುವ ಸಾಹಿತ್ಯ, ನಾಟಕ, ಜನಪದ ಸಾಹಿತ್ಯ, ನಗೆ ಸಾಹಿತ್ಯ, ಜೀವನ ಸಾಹಿತ್ಯ, ಓದುಗರನ್ನು ಹಿಡಿದಿಡುವಂತಿದ್ದು, ಕನ್ನಡ ಸಾಹಿತ್ಯದ ವಿಸ್ತಾವರನ್ನು ಹೆಚ್ಚಿಸಿವೆ. ಹದಿಹರೆಯದ ಸಮಸ್ಯೆಗಳ ಕುರಿತ ಕೃತಿಯು ಪೋಷಕರ ಪಾತ್ರದ ಕುರಿತು ಎಚ್ಚರಿಸಲಿದೆ. ಇವಲ್ಲದೆ ಸಂಕೀರ್ಣ ಬರಹಗಳು, ಅನೇಕ ಶುಭಾಷಿತ ಬರಹಗಳು, ವಿಜ್ಞಾನ ಸಾಹಿತ್ಯ, ಪ್ರಬಂಧಗಳು ಇವೆ. ಹೊಸ ಬರಹಗಾರರು ಪ್ರಬಂಧಗಳನ್ನು ಇನ್ನಷ್ಟು ಬರೆಯಬೇಕು. ಸಂಶೋಧನಾ ಕೃತಿಗಳನ್ನು ಬರೆಯುವ ಲೇಖಕರು ಆಕರಗಳನ್ನು ಸರಿಯಾಗಿ ಸಂಗ್ರಹಿಸಬೇಕು. ವಿಮರ್ಶೆ ಮತ್ತು ಸಂಶೋಧನಾ ಕೃತಿಕಾರರು ಬರವಣಿಗೆಯಲ್ಲಿ ಸ್ಪಷ್ಟತೆ ಮತ್ತು ಖಾಚಿತ್ಯತೆ ಹೊಂದಿರಬೇಕು. ಹಾಗೆಯೇ ಪುಸ್ತಕ ಪ್ರಕಟಣೆಗು ಮುನ್ನ ಕರುಡು ತಿದ್ದುವ ಕಾರ್ಯ ಸಮರ್ಪಕವಾಗಿ ಆಗಬೇಕು ಎಂದು ಸಲಹೆ ನೀಡಿದರು.
ಲೇಖಕರಾದ ಬಿ.ಆರ್. ಲಕ್ಷ್ಮಣರಾವ್, ಕುಂ. ವೀರಭದ್ರಪ್ಪ, ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ರಾ.ನಂ. ಚಂದ್ರಶೇಖರ್, ಎಚ್. ಡುಂಡಿರಾಜ್, ಎನ್.ಜಗದೀಶ್ ಕೊಪ್ಪ, ಪ್ರೊ.ಎಚ್.ಟಿ. ಪೋತೆ, ಶಶಿಧರ ಹಾಲಾಡಿ, ಮಹ್ಮದ್ ರಫಿ ಪಾಶ, ಸಿ.ಆರ್. ಚಂದ್ರಶೇಖರ್, ಸುನಂದಾ ಕುಲಕರ್ಣಿ, ಎಂ.ಕೆ. ಇಂದಿರಾ ಸೇರಿ ರಾಜ್ಯದ ಎಲ್ಲ ಭಾಗದಿಂದ ಒಟ್ಟು 69 ಲೇಖಕರು ರಚಿಸಿರುವ 69 ಪುಸ್ತಕಗಳನ್ನು ಬಿಡುಗಡೆಗೊಂಡವು.
ನಾಡೋಜ ಹಂಪ ನಾಗರಾಜಯ್ಯ, ಸಾಹಿತಿ ಭೈರಮಂಗಲ ರಾಮೇಗೌಡ, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಷಾ, ಪರೇಶ್ ಷಾ, ದೀಪಕ್ ಷಾ ಇತರರು ಉಪಸ್ಥಿತರಿದ್ದರು.