ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯದಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂತ ಸಮಾವೇಶದಲ್ಲಿ ಒಕ್ಕೊರಲ ನಿರ್ಣಯ

Santa_Samavesha
Published on

ತುಮಕೂರು: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯದಂತೆ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರಲು ನಗರದಲ್ಲಿ ಶನಿವಾರ ಸಂತ ಸಮ್ಮೇಳನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಸಾಮರಸ್ಯ, ಶಾಂತಿ, ಸೌಹಾರ್ದಯುತವಾಗಿ ಜನರು ಬಾಳಲು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020 ಅನ್ನು ಯಾವುದೇ ಕಾರಣಕ್ಕು ಸರ್ಕಾರ ಹಿಂಪಡೆಯಬಾರದು ಎಂದು ಆಗ್ರಹಿಸಲು ಸಂತ ಸಮಾವೇಶದಲ್ಲಿ ನಿರ್ಣಯಿಸಲಾಯಿತು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರು ಒಳಗೊಂಡ ‘ಸಂತರ ಸಮಾವೇಶ’ದಲ್ಲಿ ಗೋಹತ್ಯೆ, ಮತಾಂತರ, ಲವ್ ಜಿಹಾದ್, ಹಿಂದು ಅವಿಭಕ್ತ ಕುಟುಂಬ ಪದ್ಧತಿ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಈ ವೇಳೆ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಕರ್ನಾಟಕ ಧಾರ್ಮಿಕ ಹಕ್ಕು ಸ್ವಾತಂತ್ರೃ ಕಾಯ್ದೆಯನ್ನು ಯಾವುದೇ ಕಾರಣಕ್ಕು ಹಿಂಪಡೆಯಬಾರದೆಂದು ಮಠಾಧೀಶರು ಒಕ್ಕೊರಲ ಆಗ್ರಹ ಮಾಡಿದರು.

ಚಿಕ್ಕತೊಟ್ಲುಕೆರೆ ಅಟವೀ ಸುಕ್ಷೇತ್ರದ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ಕೋಟೆ ಕುಣಿಗಲ್ ಹಿರೇಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಅಟವೀ ಸುಕ್ಷೇತ್ರದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶಿಡ್ಲೇಕೋಣದ ಸಂಜಯಕುಮಾರ ನಂದ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಗುಬ್ಬಿ ತ್ಯಾವಡೇಹಳ್ಳಿಯ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ರಾಮೇನಹಳ್ಳಿ ಸಿದ್ದಲಿಂಗೇಶ್ವರ ಸ್ವಾಮಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಹುಲಿಯೂರು ದುರ್ಗದ ಶ್ರೀ ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ನಿಟ್ಟರಹಳ್ಳಿ ಆದಿಲಕ್ಷ್ಮೀ ಸಂಸ್ಥಾನದ ಶ್ರೀ ನೀಲಕಂಠಚಾರ್ಯಾ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net