

ವಿರಾಜಪೇಟೆ: ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್‌ನಲ್ಲಿ ವಾರ್ಷಿಕೋತ್ಸವ ಮತ್ತು ಲೂರ್ದು ಮಾತೆಯ ಹಬ್ಬವನ್ನು ಸೋಮವಾರ ಆಚರಿಸಲಾಯಿತು.
ಹಬ್ಬದ ಹಿಂದಿನ ಮೂರು ದಿನಗಳು ನಿತ್ಯ ವಿಶೇಷ ಪೂಜೆ, ಪ್ರಬೋಧನೆ, ಪ್ರಾರ್ಥನೆ ನೆರವೇರಿದವು. ಹಬ್ಬದಂದು ಸಂಜೆ ಗಾಯನ ಬಲಿಪೂಜೆ ನೆರವೇರಿಸಲಾಯಿತು. ಸಂತ ಅನ್ನಮ್ಮ ಚರ್ಚನ ರೆವಡೆಂಟ್ ಫಾದರ್ ಡಾ.ದಯಾನಂದ ಪ್ರಭು ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಬ್ಬದ ಪ್ರಯುಕ್ತ ಪ್ರಬೋಧನೆಯನ್ನು ಚಿಕ್ಕಮಗಳೂರಿನ ಜೋಸೆಫ್ ನಗರದ ಫಾ.ಅಲ್ವಿನ್ ಡಿ ಸೋಜಾ ಹಾಗೂ ಫಾ.ಸಿರಿಲ್ ಆನಂದ್ ನೀಡಿದರು. ಧಾರ್ಮಿಕ ಗ್ರಂಥ ಪಠಿಸಿ ಬಲಿಪೂಜೆಯಲ್ಲಿ ಪಾಲ್ಗೊಂಡರು. ಫಾದರ್ ಡಾ.ದಯಾನಂದ ಪ್ರಭು ಅವರು ಬರೆದಿರುವ ಯೇಸು ಕ್ರಿಸ್ತರ ಅಮರ ಬಲಿದಾನ ಗ್ರಂಥವನ್ನು ಫಾ.ಅಲ್ವಿನ್ ಡಿಸೋಜ ಬಿಡುಗಡೆ ಮಾಡಿದರು.
ಮೆರವಣಿಗೆ: ಹಬ್ಬದ ಪ್ರಯುಕ್ತ ಧರ್ಮಗುರುಗಳು, ಸಮುದಾಯದವರು ನಗರದಲ್ಲಿ ಸಂತ ಅನ್ನಮ್ಮ ಹಾಗೂ ಲೂರ್ದು ಮಾತೆಯ ಮೆರವಣಿಗೆ ನಡೆಸಿದರು. ಭಕ್ತರು ಮೊಂಬತ್ತಿ ಹಿಡಿದು ಸಾಗಿದರು. ವಿರಾಜಪೇಟೆ ಸುತ್ತಲಿನ ಗ್ರಾಮಗಳಿಂದ ಸಮುದಾಯದವರು ಆಗಮಿಸಿದ್ದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಾಕರ್, ಧರ್ಮಗುರುಗಳಾದ ರೆ.ಫಾ.ಮದಲೈ ಮುತ್ತು, ಫಾ.ಚಾರ್ಲ್ಸ್ ಉಪಸ್ಥಿತರಿದ್ದರು.