24 ರಂದು ಸನ್ನತಿ ಪಂಚಶೀಲ ಪಾದಯಾತ್ರೆ ಸಮಾರೋಪ

Buddha_Padayatre
Published on

ತುಮಕೂರು: ವಿಶ್ವಶಾಂತಿಗಾಗಿ ಬೌಧ್ಧ ಧಮ್ಮ ಸಂಘ ಕೈಗೊಂಡಿರುವ ಸನ್ನತ್ತಿ ಪಂಚಶೀಲ ಪಾದಯಾತ್ರೆಯ ಸಮಾರೋಪ ಸಮಾರಂಭ ಜ. 24ರಂದು ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ನಡೆಯಲಿದೆ.

ನ.15, 2024ರಂದು ವಿಶ್ವಶಾಂತಿ, ಸನ್ನತಿ ಪ್ರದೇಶ ಅಭಿವೃದ್ಧಿಗೆ ಅನುದಾನ ಮತ್ತು ಬೌದ್ಧ ಧಮ್ಮ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸುಮಾರು 855 ಕಿ.ಮೀ.,ಗಳ ಪಾದಯಾತ್ರೆಯನ್ನು ಆಯೋಜಿಸಲಾಗಿದ್ದು ಜ.16ರಂದು ತುಮಕೂರಿನಲ್ಲಿ ಭಗವಾನ್​ ಬುದ್ದರ ಅಸ್ತಿ(ಧಾತು) ಮೆರವಣಿಗೆ ನಡೆಯಲಿದೆ. ನಂತರ ಬೆಂಗಳೂರಿನತ್ತ ನಮ್ಮ ಪಾದಯಾತ್ರೆ ಮುಂದುವರೆಯಲಿದೆ ಎಂದು ಸನ್ನತಿ ಪಂಚಶೀಲ ಪಾದಯಾತ್ರೆ ನೇತೃತ್ವ ವಹಿಸಿರುವ ಬೋಧಿದತ್ತ ಬಂತೇಜಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೌದ್ಧ ಐತಿಹಾಸಿಕ ಕ್ಷೇತ್ರ ಸನ್ನತಿ ಅಭಿವೃದ್ಧಿ ಮಂಡಳಿ ಪೂರ್ಣ ಪ್ರಮಾಣದಲ್ಲಿ ರಚಿಸಿ, ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಕನಿಷ್ಟ 200 ಎಕರೆ ಪ್ರದೇಶದಲ್ಲಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸನ್ನತ್ತಿಯನ್ನು 7 ಸ್ಟಾರ್​ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಪರಿಶಿಷ್ಟ ಜಾತಿಯ ಬೌದ್ಧರ ಸಾಮಾಜಿಕ,ಆರ್ಥಿಕ ಅಭಿವೃದ್ಧಿಗಾಗಿ ಕರ್ನಾಟಕ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಬೌದ್ಧರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಬೌದ್ಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಕನಿಷ್ಠ 1000 ಕೋಟಿ ಅನುದಾನ ಈ ಬಜೆಟ್​ನಲ್ಲಿ ಒದಗಿಸುವುದು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುತ್ತಿದೆ ಎಂದರು.

ಬೌಧ್ಧ ಉಪಾಸಕ ಸಿ.ಭಾನು ಪ್ರಕಾಶ್​ ಮಾತನಾಡಿ, ಗುಲ್ಬರ್ಗದಿಂದ ಹೊರಟ ಸನ್ನತಿ ಪಂಚಶೀಲ ಪಾದಯಾತ್ರೆ ಜ.8 ರಂದು ತುಮಕೂರು ಜಿಲ್ಲೆಯ ಗಡಿ ತಾವರೆಕೆರೆಗೆ ಆಗಮಿಸಿದ್ದು, ಪಾದಯಾತ್ರೆಯನ್ನು ಸ್ವಾಗತಿಸಿ, ಅಗತ್ಯ ನೆರವು ನೀಡಲಾಗಿದೆ. ಜ.16ರಂದು ಬೆಳಗ್ಗೆ ಟೌನ್​ಹಾಲ್​ ಮುಂಭಾಗದಿಂದ ನಡೆಯುವ ಭಗವಾನ್​ ಬುದ್ದರ ಅಸ್ತಿ ಯಾತ್ರೆಯಲ್ಲಿ ಸಾರ್ವಜನಿಕರು,ಬೌಧ್ದ ಧಮ್ಮ ಉಪಾಸಕರು,ಆಗಮಿಸಿ ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಉಪಾಸಕರಾದ ಹೆಗ್ಗೆರೆ ಕೃಷ್ಣಪ್ಪ, ಶ್ರೀನಿವಾಸ್​, ಯಶಪಾಲ್​ ಬಂತೇಜಿ, ಅಜಪಾಲ್​ ಬಂತೇಜಿ, ತುಮಕೂರಿನ ಬುದ್ಧವಿಹಾರದ ಮುಖ್ಯಸ್ಥ ಪನ್ಯು ಬಂತೇಜಿ, ಉಪಾಸಕರಾದ ಛಲವಾದಿ ಶೇಖರ್​,ವಾಸುದೇವ್​, ಶ್ರೀನಿವಾಸಯ್ಯ, ಕೃಷ್ಣಪ್ಪ, ಸಿದ್ದಲಿಂಗಯ್ಯ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net