ಸ್ವಸಹಾಯ ಸಂಘದಿಂದ ಸಂಕ್ರಾಂತಿ ಸಂಭ್ರಮ

ಸ್ವಸಹಾಯ ಸಂಘದಿಂದ ಸಂಕ್ರಾಂತಿ ಸಂಭ್ರಮ
Published on

ಬೇಲೂರು: ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಸಂಘದಿಂದ ಪಟ್ಟಣದ ಶ್ರೀ ಡಾ.ಶಿವಕುಮಾರಸ್ವಾಮಿ ಸಮುದಾಯ ಭವನದ ಈಶ್ವರ ದೇಗುಲ ಮುಂಭಾಗದಲ್ಲಿ ಶುಕ್ರವಾರ ಸಡಗರ-ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು.

ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಯೋಜನಾಧಿಕಾರಿ ವಿನುತಾ ಧನಂಜಯ್ ಮಾತನಾಡಿ, ಸಂಕ್ರಾಂತಿ ಎಂದರೆ ರೈತಾಪಿ ವರ್ಗಕ್ಕೆ ಸುಗ್ಗಿಯ ಕಾಲ. ರೈತರು ಬೆಳೆದ ಫಸಲನ್ನು ಮನೆ ತರುವ ಸಂದರ್ಭ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ನಡೆದುಕೊಂಡು ಬಂದಿದೆ. ಉತ್ತರಾಯಣ ಆರಂಭದ ಕಾಲಘಟ್ಟದಲ್ಲಿ ಭೂಮಿ ಮೇಲಿನ ಪ್ರಾಣಿ, ಪಕ್ಷಿಗಳಿಗೆ ಸಂಕ್ರಾಂತಿ ಹೊಸ ಹುರುಪು ನೀಡುತ್ತದೆ. ಸಂಕ್ರಾಂತಿ ಆಚರಣೆಯನ್ನು ಹಬ್ಬಕ್ಕೂ ಮುನ್ನವೇ ಎಲ್ಲರೂ ಒಟ್ಟಾಗಿ ಸೇರಿ ಈಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಎಳ್ಳು ಬೆಲ್ಲ ನೀಡಿ ಆಚರಿಸಲಾಗುತ್ತಿದೆ.

ಪುಷ್ಪಗಿರಿ ಮಹಿಳಾ ಸಂಘವು ರಾಜ್ಯಾದ್ಯಂತ ಸಾವಿರಾರು ಸ್ವಸಹಾಯ ಸಂಘಗಗಳನ್ನು ಸ್ಥಾಪಿಸಿ, ಹಣಕಾಸು, ಸಾಲ ಸೌಲಭ್ಯ, ಕೌಶಲ್ಯ ತರಬೇತಿ ಸೇರಿದಂತೆ ಅಭಿವೃದ್ಧಿಗೆ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯುತ್ತಿದೆ. ಸಂಘವು ಪ್ರತಿ ರಾಷ್ಟ್ರೀಯ ಹಬ್ಬಗಳ ದಿನ ಮತ್ತು ಹಬ್ಬ ಹರಿದಿನಗಳನ್ನು ವಿಭಿನ್ನವಾಗಿ ಆಚರಿಸುತ್ತ ಬಂದಿದೆ ಎಂದರು.

ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ವಿಜಯಲಕ್ಷ್ಮೀ ಮಾತನಾಡಿ, ಪುಷ್ಪಗಿರಿಯ ಶ್ರೀ ಸೋಮಶೇಖರ ಸ್ವಾಮೀಜಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಪರಿಸರ, ನೀರಾವರಿ ಇನ್ನಿತರ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸುವ ಮೂಲಕ ಪುಷ್ಪಗಿರಿಯ ಕೀರ್ತಿಯ ಹೆಗ್ಗಳಿಕೆಗೆ ಕಾರಣರಾಗಿದ್ದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.

ಸಂಘದ ಪ್ರತಿನಿಧಿ ದ್ರಾಕ್ಷಾಯಿಣಿ, ಸದಸ್ಯರಾದ ಶಿಲ್ಪಾ, ವೀಣಾ, ಪಾರ್ವತಿ, ರೇಣುಕಾ, ಧನಲಕ್ಷ್ಮೀ, ಶಾರದಾ,ಪವಿತ್ರಾ, ಗೀತಾ, ರಾಣಿ, ಗೀತಾ, ತೀರ್ಥಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net