

ದಾವಣಗೆರೆ: ಕರೊನಾ ಕಟ್ಟುಪಾಡುಗಳ ನಡುವೆಯೂ ದಾವಣಗೆರೆ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬವನ್ನು ಶುಕ್ರವಾರ ಆಚರಿಸಲಾಯಿತು.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕೆಲವರು ಶುಕ್ರವಾರ ಹಬ್ಬ ಆಚರಿಸಿದರೆ, ಬಹುಪಾಲು ಜನರು ಶನಿವಾರ ಹಬ್ಬಕ್ಕೆ ಸಿದ್ಧತೆ ಕೈಗೊಂಡಿದ್ದು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಏಷ್ಯಾದ ಎರಡನೇ ಅತಿ ದೊಡ್ಡದಾದ ಚನ್ನಗಿರಿ ತಾಲೂಕು ಸೂಳೆಕೆರೆ ಹಾಗೂ ಹರಿಹರದ ತುಂಗಭದ್ರಾ ನದಿಗೆ ಸಾರ್ವಜನಿಕರು ತೆರಳಿ ನದಿಯಲ್ಲಿ ಮಿಂದು ಪೂಜೆ ಸಲ್ಲಿಸಿ ಬಗೆ-ಬಗೆಯ ಭಕ್ಷ್ಯಭೋಜನ ಸವಿದರು. ದಾವಣಗೆರೆ ತಾಲೂಕು ದೊಡ್ಡಬಾತಿಯ ಪವಿತ್ರವನ, ಆನಗೋಡು ಮೃಗಾಲಯ, ಭದ್ರಾ ನಾಲೆಗುಂಟ ವಿವಿಧೆಡೆ ಸಂಕ್ರಾತಿ ಊಟ ಸವಿಯಲು ಜನರು ಸೇರಿದ್ದರು.
ಸಂಕ್ರಾಂತಿಗೆಂದೇ ತರಹೇವಾರಿ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಚಪಾತಿ, ಕಾಯಿ ಹೋಳಿಗೆ, ಕೋಸಂಬರಿ, ಪುಂಡಿಸೊಪ್ಪು, ಮುಳಗಾಯಿ ಎಣಗಾಯಿ ಪಲ್ಯ, ಕಾಳು ಪಲ್ಯ, ಶೇಂಗಾಪುಡಿ, ಕಾರದ ಚಟ್ನಿ, ಚಿತ್ರಾನ್ನ, ಮಸಾಲೆ ಬುತ್ತಿ, ಪಲಾವ್, ರವೆ ಉಂಡಿ, ಕೇಸರಿ ಬಾತ್, ಅನ್ನ, ಸಾಂಬಾರು ಹೀಗೆ ಮೆನು ಬೆಳೆದಿತ್ತು.
ಕೋವಿಡ್‌ನಿಂದ ಸಂಭ್ರಮಾಚರಣೆಗೆ ಅಡ್ಡಿಯಾದ ಕಾರಣ ಕೆಲವರು ಮನೆಗಳ ಟೆರೇಸ್ ಮೇಲೆ ಊಟ ಸವಿಯಲು ಶಾಮಿಯಾನ ಹಾಕಿದ್ದರು.
ಹಬ್ಬದ ಖರೀದಿ: ಹಬ್ಬದ ಹಿನ್ನೆಲೆಯಲ್ಲಿ ಕಬ್ಬು, ತುಳಸಿ ಹಾರ, ಬಿಲ್ವಪತ್ರೆ, ಎಳ್ಳು, ಬೆಲ್ಲ, ಸಿಹಿ ಜೀರಿಗೆ ಕಾಳು, ಸಕ್ಕರೆ ಅಚ್ಚು ದಿನಸಿ ಸಾಮಾನುಗಳ ಖರೀದಿ ನಡೆದಿತ್ತು.
ದೇಗುಲಗಳಲ್ಲಿ ವಿಶೇಷ ಪೂಜೆ: ಸೂರ್ಯ ಪಥ ಬದಲಿಸುವ ಸಂಕ್ರಾಂತಿ ದಿನದಂದು ನಗರದ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದವು. ನಗರ ದೇವತೆ ದುರ್ಗಾಂಬಿಕಾ ದೇವಿ, ನಿಟ್ಟುವಳ್ಳಿ ದುರ್ಗಾಂಬಿಕಾ ದೇವಿ, ಕರಿಯಮ್ಮ, ಪಂಚಮುಖಿ ಆಂಜನೇಯ ದೇಗುಲ, ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು.