ಪರೀಕ್ಷೆ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ

13-hvr-03
Published on

ವಿಜಯವಾಣಿ ಸುದ್ದಿಜಾಲ ಸವಣೂರ

ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಕರೊನಾ ರೋಗದ ಭೀತಿಯಿರುವುದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭದ ಮೂರು ದಿನಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಕಂದಾಯ ಇಲಾಖೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೇಂದ್ರಗಳಿಗೆ ಬರಲು ವಾಹನದ ವ್ಯವಸ್ಥೆ ಮಾಡಬೇಕು. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ನೀರು, ಆಹಾರವನ್ನು ಮನೆಯಿಂದ ತೆಗೆದುಕೊಂಡು ಬರುವಂತೆ ಸೂಚಿಸಬೇಕು. ಕ್ವಾರಂಟೈನ್ ಮಾಡಿದ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಬಾರದು. ಕ್ವಾರಂಟೈನ್ ಹಾಗೂ ಕಂಟೇನ್ಮೆಂಟ್ ಜೋನ್​ನಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇನ್ಸಿಡೆಂಟ್ ಕಮಾಂಡರ್​ನಿಂದ ಪರವಾನಗಿ ಪಡೆದು ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸಬೇಕು. ಅವರನ್ನು ಕೇಂದ್ರಕ್ಕೆ ಕರೆತರಲು ಅಂಬುಲೆನ್ಸ್ ಬಳಕೆ ಮಾಡಿಕೊಳ್ಳದೇ ವಿಶೇಷ ವಾಹನದ ವ್ಯವಸ್ಥೆ ಮಾಡಬೇಕು ಎಂದರು.

ಪರೀಕ್ಷಾ ಪೂರ್ವದಲ್ಲಿ ಮಕ್ಕಳು ಕೇಂದ್ರಗಳಿಗೆ ಒಂದು ತಾಸು ಮುಂಚಿತವಾಗಿ ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಅದಕ್ಕೆ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರೋಗದ ಲಕ್ಷಣಗಳು ಕಂಡು ಬಂದ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಆಸನಗಳ ವ್ಯವಸ್ಥೆ ಮಾಡಿ ಪ್ರತಿಯೊಬ್ಬರಿಗೆ 6 ಅಡಿ ಅಂತರವನ್ನು ಕಾಯ್ದುಕೊಳ್ಳುವಂತೆ ನಿಗಾ ವಹಿಸಬೇಕು. ಈ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್​ಗಳನ್ನು ವಿತರಣೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ವಿದ್ಯಾರ್ಥಿಗಳು ತಾಲೂಕಿನ ವಿವಿಧ ಭಾಗಗಳಿಂದ ಪರೀಕ್ಷೆ ಬರೆಯಲು ಗ್ರಾಮೀಣ ಪ್ರದೇಶಗಳಿಂದ ಬರುತ್ತಿದ್ದು ಅವರಿಗೆ ತೊಂದರೆಯಾಗದಂತೆ ಕರೆತರಲು ಸಾರಿಗೆ ಇಲಾಖೆ ವಾಹನದ ಅನುಕೂಲ ಕಲ್ಪಿಸಬೇಕು. ಪ್ರತಿ ವಾಹನದಲ್ಲಿ 30 ವಿದ್ಯಾರ್ಥಿಗಳಿರಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಾಹನ ಓಡಿಸಬೇಕು. ಬಸ್ ಸಂಚಾರ ವ್ಯವಸ್ಥೆ ಇಲ್ಲದ ಪ್ರದೇಶಗಳ ಮಕ್ಕಳನ್ನು ಕರೆತರಲು ವಿವಿಧ ಇಲಾಖೆ ವಾಹನಗಳನ್ನು ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿಗೆ ವಾಹನದ ವ್ಯವಸ್ಥೆ ಬೇಕಾದರೆ ಡಿಡಿಪಿಐ ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೇಂದ್ರದ ಸುತ್ತ ಹೆಚ್ಚು ಜನ ಸೇರದಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕು. ಹೊರಗಿನಿಂದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ವಸತಿ ಅವಶ್ಯಕತೆಯಿದ್ದಲ್ಲಿ ಬಿಸಿಎಂ ಮತ್ತು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ವಸತಿ ವ್ಯವಸ್ಥೆ ಕಲ್ಪಿಸಬೇಕು. ವಸತಿ ನಿಲಯಗಳನ್ನು ಪುರಸಭೆಯಿಂದ ಸ್ಯಾನಿಟೈಸ್ ಮಾಡುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದರು.

ಬಿಇಒ ಐ.ಬಿ. ಬೆನಕೊಪ್ಪ ಮಾತನಾಡಿ, ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 7 ಮುಖ್ಯ ಕೇಂದ್ರ ಹಾಗೂ 3 ಉಪಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1,973 ವಿದ್ಯಾರ್ಥಿಗಳು ಹಾಗೂ 69 ವಲಸೆ ವಿದ್ಯಾರ್ಥಿಗಳು ಸೇರಿ ಒಟ್ಟು 2,066 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಕೋವಿಡ್ ಮುಂಜಾಗ್ರತ ಕ್ರಮವಾಗಿ ಆರೋಗ್ಯ ತಪಾಸಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆರೋಗ್ಯ ತಪಾಸಣೆಗೆ 14 ಕೌಂಟರ್​ಗಳನ್ನು ಪರೀಕ್ಷಾ ಕೇಂದ್ರದಲ್ಲಿ ತೆರೆಯಲಾಗುವುದು. ಈ ಕಾರ್ಯಗಳಿಗೆ 28 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ ಎಂದರು.

ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ತಾ.ಪಂ. ಇಒ ಪಿ. ಮುನಿಯಪ್ಪ, ಶಿಕ್ಷಣ ಇಲಾಖೆ ಸಮನ್ವಯಾಧಿಕಾರಿ ನಾಗರಾಜ ಬಣಕಾರ, ಟಿಎಚ್​ಒ ಚಂದ್ರಕಲಾ ಬಸ್ತಿ, ಬಿಸಿಎಂ ಅಧಿಕಾರಿ ಆನಂದಪ್ಪ ಜೆ., ಎಎಸ್​ಐ ಎಂ.ಎಸ್. ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net