ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಭಗ್ನ : ಟೈರ್‌ಗೆ ಬೆಂಕಿಯಿಟ್ಟು ಪ್ರತಿಭಟನೆ

0501 KLB 02
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ನಗರದ ಸೂಪರ್ ಮಾರ್ಕೇಟ್ ಪ್ರದೇಶ ಸಿಟಿ ಬಸ್ ನಿಲ್ದಾಣ ಬಳಿಯಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಭಗ್ನಗೊಳಿಸಿ ಅಪಮಾನ ಮಾಡಿದ ಘಟನೆ ಭಾನುವಾರ ಸಂಜೆ ನಡೆದಿದೆ.ಇದರಿಂದಾಗಿ ಕೆಲಹೊತ್ತು ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು.

ಸAಗೋಳ್ಳಿ ರಾಯಣ್ಣ ವೃತ್ತದಲ್ಲಿರುವ ಪ್ರತಿಮೆಯ ಕೈಯಲ್ಲಿರುವ ಖಡ್ಗವನ್ನು ಮುರಿದು ಅದನ್ನು ಕಿತ್ತುಕೊಂಡು ಹೋಗಿ ಸಮೀಪದಲ್ಲಿಯೆ ಇರುವ ಜಾಲಿಗಿಡಗಳಲ್ಲಿ ಮರೆಯಾಗಲು ಪ್ರಯತ್ನಿಸಿದ್ದಾನೆ. ಅದನ್ನು ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆನ್ನಲ್ಲಿಯೇ ಸ್ಥಳಕ್ಕೆ ದೌಡಾಯಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿ ಭಾನುವಾರ ಸಂಜೆ ಸಿಟಿ ಬಸ್ ನಿಲ್ದಾಣದಲ್ಲಿ ಒಡಾಡಿಕೊಂಡಿದ್ದಾನೆ. ಅಲ್ಲಿ ಕೆಲವರಿಗೆ ತೊಂದರೆ ಮಾಡಿದ್ದಾನೆ. ಅಲ್ಲದೆ ಮಹಿಳಾ ಶೌಚಾಲಯ ಬಳಿಯಲ್ಲಿ ಗೊಂದಲ ಸೃಷ್ಟಿಸಿದ್ದ. ಅದನ್ನು ನೋಡಿದ ಜನರು ಆತನನ್ನು ಹಿಡಿದು ಥಳಿಸಿದ್ದಾರೆ. ಆಗ ಓಡಿಕೊಂಡು ಬಂದು ಪ್ರತಿಮೆ ಆವರಣಕ್ಕೆ ನುಗ್ಗಿ ಈ ಕೃತ್ಯ ನಡೆಸಿದ್ದಾನೆ. ಆತ ಮಾನಸಿಕ ಅಸ್ವಸ್ಥನಾಗಿದ್ದು ಕರ್ನಾಟಕದವನು ಅಲ್ಲ, ಹಿಂದಿಯಲ್ಲಿ ಮಾತನಾಡುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ.

ಕೃತ್ಯ ನಡೆದ ಮಾಹಿತಿ ಅರಿಯುತ್ತಲೇ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು, ಕುರುಬ ಸಮಾಜ ಬಾಂಧವರು ದೌಡಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆ ಆಯುಕ್ತರಿಗೆ ಮಾಹಿತಿ ನೀಡಿದರು. ಬೆನ್ನಲ್ಲಿಯೇ ಜಗತ್ ವೃತ್ತಕ್ಕೆ ತೆರಳಿ ಅಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ಸುಮಾರು ಹೊತ್ತು ಪ್ರತಿಭಟನೆ ನಡೆಸಿದರು.ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತ್ತು. ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಪ್ರತಿಮೆ ಆವರಣಕ್ಕೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.ಮಹಾಂತೇಶ ಕೌಲಗಿ,ಶರಣು ಬೇಲೂರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net