ಸಂಗೀತ ನೃತ್ಯ ಅಕಾಡೆಮಿ ಶಿಷ್ಯವೇತನಕ್ಕೆ ಅರ್ಜಿ

kannada and culture dept
Published on

ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಶಿಷ್ಯವೇತನಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಿಂದ ಸಂದರ್ಶನವನ್ನು ಕೈಬಿಟ್ಟಿದ್ದು, ಅರ್ಜಿಯ ಜತೆಗೆ ಮೊಬೈಲ್‌ಗಳ ಮೂಲಕ ಚಿತ್ರೀಕರಿಸಿದ ವಿಡಿಯೊಗಳನ್ನು ಆಹ್ವಾನಿಸಿದೆ.

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್, ಸಂಗೀತ- ನೃತ್ಯ ಅಭ್ಯಸಿಸುತ್ತಿರುವ 16ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿ, ಈವರೆಗೆ ಶಿಷ್ಯವೇತನ ನೀಡಲಾಗುತ್ತಿತ್ತು. ಇದರಿಂದಾಗಿ ದೂರದ ಊರುಗಳಿಂದ ಸಂದರ್ಶನಕ್ಕೆ ಬರುವವರಿಗೆ ಸಮಸ್ಯೆ ಆಗುತ್ತಿತ್ತು. ಪ್ರಯಾಣ ಸೇರಿ ವಿವಿಧ ವೆಚ್ಚಗಳಿಗೆ ಹೆಚ್ಚಿನ ಹಣ ವ್ಯಯವಾಗುತ್ತಿತ್ತು. ಆದ್ದರಿಂದ ಈ ಬಾರಿ ಸಂದರ್ಶನದ ಬದಲು, ವಿಡಿಯೊಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಅರ್ಹ ಅಭ್ಯರ್ಥಿಗಳು ಸಂಗೀತ- ನೃತ್ಯದ ವಿವಿಧ ಪ್ರಕಾರಗಳಿಗೆ ಅನುಗುಣವಾಗಿ ವಿಡಿಯೊ ಚಿತ್ರೀಕರಿಸಿ, ಪೆನ್‌ಡ್ರೈವ್ ಮೂಲಕ ಕಳುಹಿಸಿಕೊಡಬೇಕು. ಇದನ್ನು ತೀರ್ಪುಗಾರರು ಪರಿಶೀಲಿಸಿ ಆಯ್ಕೆ ಮಾಡಲಿದ್ದಾರೆ. 2023-24 ಮತ್ತು 2024-25ನೇ ಸಾಲಿನ ಶಿಷ್ಯವೇತನಕ್ಕೆ 200 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದವರಿಗೆ ತಲಾ 10 ಸಾವಿರ ರೂ. ನಗದು ನೀಡಲಾಗುತ್ತದೆ. ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾ ಕೀರ್ತನ, ಗಮಕ ವಿಭಾಗಗಳಲ್ಲಿ ಶಿಷ್ಯ ವೇತನಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಗೀತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು 20 ನಿಮಿಷ ಹಾಗೂ ನೃತ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು 30 ನಿಮಿಷಕ್ಕೆ ಮೀರದಂತೆ ಚಿತ್ರೀಕರಿಸಿ, ಆ. 12ರೊಳಗೆ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಒಂದು ಕಲಾ ಪ್ರಕಾರಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಸಂಗೀತ- ನೃತ್ಯ ಪ್ರತ್ಯೇಕವಾದರೆ ಆದ್ಯತೆ: ಸಂಗೀತ ಮತ್ತು ನೃತ್ಯ ಪ್ರಕಾರಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಈ ಕಲಾ ಪ್ರಕಾರಗಳ ವ್ಯಾಪ್ತಿ ದೊಡ್ಡದಿರುವುದರಿಂದ ಪ್ರತ್ಯೇಕವಾಗಬೇಕೆಂಬ ಕೂಗು ಮೊದಲಿನಿಂದ ಇದೆ. ಇದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ಎರಡೂ ಪ್ರತ್ಯೇಕವಾದರೆ ಉಭಯ ಕಲೆಗೂ ಸೂಕ್ತ ಆದ್ಯತೆ ಸಿಗುತ್ತದೆ. ನನ್ನ ಅವಧಿಯಲ್ಲಿ ಎರಡೂ ಕಲೆಯನ್ನು ಸಮಾನವಾಗಿ ಕಂಡು, ಪ್ರೋತ್ಸಾಹ ನೀಡಲಾಗುತ್ತದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net