ಶರಣರಿಗೆ ಆಶ್ರಯವಿತ್ತ ಸಂಗನಬಸವನದೊಡ್ಡಿ

Rmgm-Ph-01-Sanganabasavanadoddi Gramayana Story New Temple Photo - 12-10-2025
Published on

* ಮೈಸೂರು ಮಹಾರಾಜರ ಕಾಲದಿಂದಲೂ ಗುರುತಿಸಿಕೊಂಡ ಗ್ರಾಮ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಕೃಷಿ, ಹೈನುಗಾರಿಕೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಗ್ರಾಮ ರಾಮನಗರ ತಾಲೂಕು ಕಸಬಾ ಹೋಬಳಿಯ ಸಂಗನಬಸವನದೊಡ್ಡಿ ವಿಶೇಷ ಐತಿಹ್ಯಕ್ಕೆ ಹೆಗ್ಗುರುತಾಗಿದೆ.

ರಾಮನಗರದಿಂದ 7 ಕಿಮೀ ದೂರದಲ್ಲಿರುವ ಸಂಗನಬಸವನದೊಡ್ಡಿಯನ್ನು ಈ ಹಿಂದೆ ಬಸವನದೊಡ್ಡಿ ಎಂದು ಕರೆಯಲಾಗುತ್ತಿತ್ತು. ಆದರೆ, ಕೂಡಲ ಸಂಗಮದಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಶರಣರು ಈ ಗ್ರಾಮದಲ್ಲಿ ವಿಶ್ರಾಂತಿ ಪಡೆಯಲು ಹಾಗೂ ಅವರ ಪೂಜಾದಿ ಕಾರ್ಯಗಳಿಗೆ ಗ್ರಾಮಸ್ಥರು ಅನುವು ಮಾಡಿಕೊಟ್ಟದ್ದರಿಂದ ಶರಣರು, ಬಸವನದೊಡ್ಡಿ ಬದಲಾಗಿ ಸಂಗನಬಸವನದೊಡ್ಡಿ ಎಂದು ಕರೆದರು. ಸಂಗನ ಎಂದರೆ ಶಿವ. ಶರಣರ ಕಾಲದಲ್ಲೇ ಬಸವನದೊಡ್ಡಿ ಗ್ರಾಮ ಸಂಗನಬಸವನದೊಡ್ಡಿಯಾಯಿತು ಎಂದು ಹಿರಿಯರು ಹೇಳುತ್ತಾರೆ.

ಶರಣರ ತರವಾಯ ಮೈಸೂರು ಮಹಾರಾಜರ ಆಳ್ವಿಕೆ ಕಾಲದಿಂದಲೂ ಸಂಗನಬಸವನದೊಡ್ಡಿ ಗುರುತಿಸಿಕೊಂಡಿದ್ದು, ಸುಮಾರು 1,500 ಜನ, 950 ಮತದಾರರಿದ್ದಾರೆ. ಮೊದಲು ಗರಿ ಶೆಡ್, ನಾಡು ಹೆಂಚಿನ ಮನೆಗಳು, ಮಣ್ಣಿನ ಬೀದಿ ರಸ್ತೆಗಳಿಂದ ಕೂಡಿದ್ದ ಗ್ರಾಮ ಇಂದು ಕಾಂಕ್ರೀಟ್ ಮನೆಗಳು, ಕಾಂಕ್ರೀಟ್, ಡಾಂಬರು ರಸ್ತೆಗಳನ್ನು ಹೊಂದಿ ಅಭಿವೃದ್ಧಿಯತ್ತ ಸಾಗುತ್ತಿದೆ. ಕೇತೋಹಳ್ಳಿ ರೈಲು ನಿಲ್ದಾಣದ ತೆಗೆ ಬೆಂ-ಮೈ ಎಕ್ಸ್ಪ್ರೆಸ್ ವೇಯಿಂದ ರಾಮನಗರ ಬೈಪಾಸ್ ರಸ್ತೆಗೆ ಸಂಪರ್ಕ ಕೊಂಡಿಯಾಗಿದೆ.

ಕೃಷಿ, ಹೈನುಗಾರಿಕೆ ಹೆಚ್ಚು

ಸಂಗನಬಸವನದೊಡ್ಡಿಯಲ್ಲಿ ಕೃಷಿಕರೇ ಹೆಚ್ಚಿದ್ದು, ಶೈಕ್ಷಣಿಕ, ಕಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ಮಾವು, ತೆಂಗು, ಅಡಕೆ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಹೈನುಗಾರಿಕೆಯನ್ನು ಹೆಚ್ಚಿನ ಮಂದಿ ಅವಲಂಬಿಸಿದ್ದು, ಗ್ರಾಮದಲ್ಲಿ ನಿತ್ಯ 1,200 ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಮೈಸೂರು ಮಹಾರಾಜರ ಕಾಲದಿಂದ ಇತ್ತೀಚಿನ ಕೆಲ ವರ್ಷಗಳವರೆಗೂ ಗ್ರಾಮದಿಂದ ರಾಮನಗರಕ್ಕೆ ಸೈಕಲ್ಗೆ ಹಾಲಿನ ಡಬ್ಬಗಳನ್ನು ಕಟ್ಟಿಕೊಂಡು ಹೋಗಿ, ಮಾರಾಟ ಮಾಡುತ್ತಿದ್ದರು. ಈಗಲೂ ಕೆಲವರು ಕೇತೋಹಳ್ಳಿ ರೈಲು ನಿಲ್ದಾಣದಿಂದ ಬೆಂಗಳೂರಿಗೂ ಹಾಲು ತೆಗೆದುಕೊಂಡು ಹೋಗಿ ಮಾರಿ ಬರುವುದನ್ನು ಕಾಣಬಹುದು.

ಹೆಣ್ಣು ದೇವರ ದೇಗುಲಗಳಿಲ್ಲ

ಗ್ರಾಮದಲ್ಲಿ ಬಸವೇಶ್ವರ, ಆಂಜನೇಯ, ಶನೈಶ್ಚರಸ್ವಾಮಿ ದೇವಾಲಯಗಳಿವೆ. ಬೇರೆ ಗ್ರಾಮಗಳಲ್ಲಿ ಗಂಡು, ಹೆಣ್ಣು ದೇವತೆ ದೇವಾಲಯಗಳಿರುವುದು ಸಾಮಾನ್ಯ. ಅಂತೆಯೇ ಶೇ.99 ಗ್ರಾಮಗಳಲ್ಲಿ ಎರಡೂ ದೇವಾಲಯಗಳನ್ನು ಕಾಣುತ್ತೇವೆ. ಆದರೆ, ಈ ಗ್ರಾಮದಲ್ಲಿ ಯಾವುದೇ ಹೆಣ್ಣು ದೇವರ ದೇಗುಲಗಳಿಲ್ಲ ಎಂಬುದು ಮತ್ತೊಂದು ವಿಶೇಷ. ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಊರ ಹಬ್ಬ, ಗ್ರಾಮ ದೇವತೆಗಳ ಅಗ್ನಿಕೊಂಡ ನಡೆಯುವುದಿಲ್ಲ.

ನಾಟಕ ಪ್ರದರ್ಶಿಸಿದರೆ ಮಳೆಬೆಳೆ

ಗ್ರಾಮದ ಒಂದು ಜಾಗದಲ್ಲಿ ಗ್ರಾಮ ದೇವರು ಶನೈಶ್ವರಸ್ವಾಮಿ ಪೂಜೆ ಮಾಡಿ, ನಾಟಕ ಪ್ರದರ್ಶಿಸಿದರೆ ಆ ವರ್ಷ ಮಳೆ ಬೆಳೆ ಉತ್ತಮವಾಗುವ ಜತೆಗೆ ಗ್ರಾಮಕ್ಕೆ ಯಾವ ಕೆಡಕೂ ಆಗುವುದಿಲ್ಲ ಎಂಬುದು ಹಿರಿಯರ ನಂಬಿಕೆ. ಇದು ಇಂದಿಗೂ ಮುಂದುವರಿದಿದೆ.

15 ಅಡಿ ಆಂಜನೇಯ ಮೂರ್ತಿ

ಗ್ರಾಮದ ಪಕ್ಕದಲ್ಲೇ ಏಕಶಿಲೆಯಲ್ಲಿ ಸುಮಾರು 15 ಅಡಿಯ ಆಂಜನೇಯ ವಿಗ್ರಹವಿದೆ. 25 ವರ್ಷಗಳ ಹಿಂದೆ ದೇವಾಲಯ ನಿರ್ಮಾಣ ಮಾಡಲಾಗಿತ್ತು. ಆದರೆ, ಇಂದು ದೇವಾಲಯ ಕಟ್ಟಡ ರಸ್ತೆಗೆ ಹೋಗಿರುವ ಕಾರಣ ವಿಗ್ರಹ ಮಾತ್ರ ಇದ್ದು, ಅಲ್ಲೇ ಪೂಜೆ ನಡೆಯುತ್ತಿದೆ.

ಜಿಲ್ಲೆಯ ಮೊದಲ ಎಲ್ಇಡಿ ಬಲ್ಬ್

ಜಿಲ್ಲೆಯಲ್ಲಿಯೇ ಪ್ರಥಮವಾಗಿ 2020ರಲ್ಲಿ ಬೆಸ್ಕಾಂ ಇಡೀ ಗ್ರಾಮಕ್ಕೆ ವಿದ್ಯುತ್ ತಂತಿ ಬದಲಾಯಿಸಿ ಓವರ್ ಹೆಡ್ ಕೇಬಲ್ ಅಳವಡಿಕೆ ತೆಗೆ ಕೆ ಆರ್ ಐ ಡಿ ಎಲ್ ಅಧ್ಯಕ್ಷರಾಗಿದ್ದ ಎಂ.ರುದ್ರೇಶ್ ಅವಧಿಯಲ್ಲಿ ಸಿಎಸ್ಆರ್ ಅನುದಾನದಲ್ಲಿ ಗ್ರಾಮಕ್ಕೆ ಎಲ್ಇಡಿ ಲೈಟ್ ಅಳವಡಿಕೆ ಮಾಡಲಾಗಿದೆ.

ಸ್ವಚ್ಛತೆಯಲ್ಲಿ ಮುಂದು

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ಬೀದಿಯೂ ಸಿಮೆಂಟ್ ರಸ್ತೆ. ರಸ್ತೆ ಪಕ್ಕ ಚರಂಡಿ ನಿರ್ಮಿಸಲಾಗಿದೆ. ಜತೆಗೆ 30 ವರ್ಷಗಳ ಹಿಂದೆ ವರ್ಲ್ಡ್ ಬ್ಯಾಂಕ್ ಸ್ಕೀಂನಲ್ಲಿ ದೊಡ್ಡದಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ.

ಅಂತರ್ಜಲ ಪೂರಕ ಕೆರೆ

ಕೇತೋಹಳ್ಳಿ ಕೆರೆ ಕೆಳಭಾಗದಲ್ಲಿ ಹೆಚ್ಚಾಗಿ ರೈತರ ಜಮೀನುಗಳಿವೆ. ಕೊಳವೆ ಬಾವಿಗಳಿಗೆ , ಹೈನುಗಾರಿಕೆ, ವ್ಯವಸಾಯಕ್ಕೆ ಅಂತರ್ಜಲ ಪೂರಕವಾಗಿ ಕೆರೆ ಸಹಾಯಕವಾಗಿದೆ. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ತೆಂಗು, ಅಡಕೆ, ಭತ್ತ ಬೆಳೆಯಲಾಗುತ್ತದೆ.

ಒಂದೇ ಕಟ್ಟಡದಲ್ಲಿ ದೇಗುಲ

ಗ್ರಾಮದಲ್ಲಿ ಈ ಹಿಂದೆಯೇ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಬಸವೇಶ್ವರ ಮತ್ತು ಆಂಜನೇಯ ದೇವಾಲಯ ನಿರ್ಮಿಸಿಕೊಟ್ಟಿದ್ದರು. ಆದರೆ ದೇವಾಲಯಗಳು ರಸ್ತೆಗೆ ಸೇರಿದ ಕಾರಣ ಬೇರೆ ಜಾಗದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಒಂದೇ ಕಟ್ಟಡದಲ್ಲಿ ಎರಡೂ ದೇವಾಲಯಗಳು ನಿರ್ಮಾಣಗೊಳ್ಳುತ್ತಿವೆ.

ಸಂಗನಬಸವನದೊಡ್ಡಿ ಗ್ರಾಮ ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿದ್ದು, ವಚನಕಾರರ ಕಾಲದಿಂದಲೂ ಧಾರ್ಮಿಕವಾಗಿ ಗ್ರಾಮ ಗುರುತಿಸಿಕೊಂಡಿದೆ. ಗ್ರಾಮದ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸುತ್ತಿದ್ದಾರೆ. ಪುಣ್ಯ ಪುರುಷರ ಪಾದಸ್ಪರ್ಶವಾದ ಈ ಜಾಗದಲ್ಲಿ ನೆಲೆಸಿರುವ ನಾವೇ ಧನ್ಯರು. ವರದರಾಜ ಗೌಡಗ್ರೇಟರ್ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಮಾಜಿ ಅ‘್ಯಕಸಂಗನಬಸವನದೊಡ್ಡಿ
ಸಂಗನಬಸವನದೊಡ್ಡಿಯಲ್ಲಿ ಗ್ರಾಮದೇವತೆಗಳ ಹಬ್ಬ ಮಾಡದ ಕಾರಣ ಗಣೇಶ ಹಾಗೂ ದೀಪಾವಳಿಯಲ್ಲಿ ಗ್ರಾಮ ದೇವರ ಜತೆಗೆ ಅಕ್ಕಪಕ್ಕದ ಗ್ರಾಮದ ದೇವರುಗಳನ್ನು ತಂದು ಪ್ರತಿಷ್ಠಾಪಿಸಿ, ವಿಜೃಂಭಣೆಯಿಂದ ಉತ್ಸವ, ಮೆರವಣಿಗೆ ಮಾಡಲಾಗುತ್ತದೆ. ತೆಗೆ ಏ.1ರಂದು ಗ್ರಾಮಸ್ಥರೆಲ್ಲ ಸೇರಿ ಡಾ.ಶಿವಕುಮಾರ ಸ್ವಾಮೀಜಿಗಳ ಜನ್ಮದಿನ ಆಚರಿಸಿ, 2 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಹೋಳಿಗೆ ಪ್ರಸಾದ, ಅನ್ನಸಂತರ್ಪಣೆ ಏರ್ಪಡಿಸುತ್ತೇವೆ.ನಾಗೇಶ್ಸಂಗನಬಸವನದೊಡ್ಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net