ಸಂಡೂರು ಜನರಿಗೆ ಜಲ ಸಂಕಷ್ಟ

ತಾರಾನಗರದ ನಾರಿಹಳ್ಳ ಜಲಾಶಯ ಬಳಿ ಇರುವ ನೀರು ಶುದ್ಧೀಕರಣ ಘಟಕ.
Published on

ಸಂಡೂರು: ನಾರಿಹಳ್ಳ ಜಲಾಶಯದಲ್ಲಿ ಸಾಕಷ್ಟು ನೀರಿದೆ. ಜಲ ಶುದ್ಧೀಕರಣ ಘಟಕವೂ ಇದೆ. ಆದರೆ, ವಿದ್ಯುತ್ ಸಮಸ್ಯೆಯಿಂದ ಪಟ್ಟಣದಲ್ಲಿ ಕುಡಿವ ನೀರಿಗೆ ಸಂಕಷ್ಟ ಎದುರಾಗಿದ್ದು, ಜನರು ಪರದಾಡುವಂತಾಗಿದೆ.

ಪಟ್ಟಣದಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಹಿಂದೆ ಮಳೆ ಅಭಾವವಿದ್ದಾಗಲೂ ಪುರಸಭೆ ಎರಡ್ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿತ್ತು. ಇದೀಗ ಉತ್ತಮ ಮಳೆಯಿಂದ ನಾರಿಹಳ್ಳ ಜಲಾಶಯ ಭರ್ತಿಯಾಗಿದ್ದರೂ, ಸಮರ್ಪಕವಾಗಿ ಶುದ್ಧ ನೀರು ಪೂರೈಸುತ್ತಿಲ್ಲ. ಪುರಸಭೆ 7-8 ದಿನಕ್ಕೊಮ್ಮೆ ಸರಬರಾಜು ಮಾಡುತ್ತಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ.

ವಿದ್ಯುತ್ ಕೊಡಲು ಎನ್‌ಎಂಡಿಸಿ ನಿರಾಕರಣೆ: ತಾರಾನಗರದ ನಾರಿಹಳ್ಳ ಜಲಾಶಯ ಬಳಿ ಸಂಡೂರು ಪುರಸಭೆ ಮತ್ತು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ) ಎರಡು ನೀರು ಶುದ್ಧೀಕರಣ ಘಟಕಗಳಿವೆ. ಎನ್‌ಎಂಡಿಸಿಗೆ ಪ್ರತ್ಯೇಕ ವಿದ್ಯುತ್ ಘಟಕ ಸೌಲಭ್ಯವಿದ್ದು, ನಿರಂತರ ಕಾರ್ಯನಿರ್ವಹಿಸಲಿದೆ.

ಆದರೆ ಪುರಸಭೆಯ ಘಟಕಕ್ಕೆ ಮಾತ್ರ ತೋರಣಗಲ್ ಗ್ರಾಮೀಣ ವಿದ್ಯುತ್ ಕೇಂದ್ರದ ಸಂಪರ್ಕ ಕೊಟ್ಟಿದ್ದು, ಸಮರ್ಪಕವಾಗಿರಲ್ಲ. ಅಲ್ಲಿ ಕರೆಂಟ್ ಇದ್ದಾಗ ಸಂಡೂರಲ್ಲಿ ಕಡಿತಗೊಂಡಿರುತ್ತದೆ. ಇಲ್ಲಿ ವಿದ್ಯುತ್ ಇದ್ದರೆ ಅಲ್ಲಿ ಹೋಗಿರುತ್ತದೆ. ಹೀಗಾಗಿ ಸಮರ್ಪಕ ನೀರು ಪೂರೈಕೆಗೆ ಸಮಸ್ಯೆಯಾಗಿದೆ.

ಹೀಗಾಗಿ ಹತ್ತಿರದಲ್ಲೇ ಇರುವ ಎನ್‌ಎಂಡಿಸಿ ವಿದ್ಯುತ್ ಘಟಕಕ್ಕೆ ಕರೆಂಟ್ ಕೇಳಿದರೆ ಕೊಡುತ್ತಿಲ್ಲ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು. ಸಂಡೂರಿನ ಅದಿರು, ನೆಲ, ಜಲ ಸೇರಿ ತಾಲೂಕು ಆಡಳಿತದಿಂದ ಹಲವು ಸೌಲಭ್ಯ ಪಡೆಯುತ್ತಿರುವ ಎನ್‌ಎಂಡಿಸಿ 20-25 ವರ್ಷಗಳಿಂದ ವಿದ್ಯುತ್ ವಿತರಿಸಲು ನಿರಾಕರಿಸುತ್ತಿದೆ. ನೀರು ಶುದ್ಧೀಕರಣ ಘಟಕಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಆಗದ ಕಾರಣ ಜನರು ಸಂಕಷ್ಟ ಎದುರಿಸುವಂತಾಗಿದೆ. ತಾರಾನಗರದ ಬಳಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಿಸಲು ಯೋಜಿಸಿದ್ದು, ಕಾರ್ಯಗತವಾಗಿಲ್ಲ.

ಇಲ್ಲಿದೆ ಸಮಸ್ಯೆ ಮೂಲ: 1978ರಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಎಂ.ವೈ.ಘೋರ್ಪಡೆ ಅವರು ಸಂಡೂರು ಪಟ್ಟಣ ಮತ್ತು ಎನ್‌ಎಂಡಿಸಿ ಟೌನ್‌ಶಿಪ್ ಜನರಿಗೆ ಕುಡಿವ ನೀರೊದಗಿಸಲು ತಾರಾನಗರ ಬಳಿ ಜಲಾಶಯ ನಿರ್ಮಿಸಿದರು. ಅದರ ಕೆಳಭಾಗದಲ್ಲಿ ಪುರಸಭೆ ಹಾಗೂ ಎನ್‌ಎಂಡಿಸಿ ತಲಾ ಒಂದು ನೀರು ಶುದ್ಧೀಕರಣ ಘಟಕ ನಿರ್ಮಿಸಿಕೊಂಡವು. ಎನ್‌ಎಂಡಿಸಿ ದೋಣಿಮಲೆ ವಿದ್ಯುತ್ ವಿತರಣಾ ಘಟಕದಿಂದ ವಿದ್ಯುತ್ ಮಾರ್ಗ ಕಲ್ಪಿಸಿಕೊಂಡಿತು. ಆದರೆ, ಪುರಸಭೆಯ ಪಂಪ್‌ಹೌಸ್‌ಗೆ ತೋರಣಗಲ್ ಗ್ರಾಮೀಣ ವಿದ್ಯುತ್ ಮಾರ್ಗದಿಂದ ಸಂಪರ್ಕ ಪಡೆಯಿತು. ಆರಂಭದಲ್ಲಿ ಸಮಸ್ಯೆ ಇರಲಿಲ್ಲ. 2000ರ ಬಳಿಕ ಮಳೆ ಕ್ಷೀಣಿಸುತ್ತಿದ್ದಂತೆ ಜಲ ಸಮಸ್ಯೆ ಬಿಗಡಾಯಿಸಿತು. ಪ್ರಮುಖವಾಗಿ ವಿದ್ಯುತ್ ಕೊರತೆಯಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಧಿಕಾರಿಗಳು ಶೀಘ್ರವೇ ಪರಿಹಾರ ಕಂಡುಕೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.

ಸಂಡೂರು ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳಿಗೆ ವಿಚಾರಿಸಿದರೆ ಒಬ್ಬರ ಕಡೆ, ಮತ್ತೊಬ್ಬರು ಬೊಟ್ಟು ತೋರಿಸುತ್ತಾರೆ. ಶಾಶ್ವತ ಪರಿಹಾರ ದೊರೆಯುವವರೆಗೆ ಸೋಲಾರ್ ವ್ಯವಸ್ಥೆ ಸೇರಿ ಪರ್ಯಾಯ ತಾತ್ಕಾಲಿಕ ವ್ಯವಸ್ಥೆ ಮಾಡುವ ಮೂಲಕ ಸಮರ್ಪಕವಾಗಿ ನೀರು ಪೂರೈಸಬೇಕು.ಕೆ.ಆರ್.ಕುಮಾರಸ್ವಾಮಿಸಂಡೂರು ಪಟ್ಟಣ ನಿವಾಸಿ ನಾರಿಹಳ್ಳ ಜಲಾಶಯದ ಕೆಳಭಾಗದಲ್ಲಿ ವಿದ್ಯುತ್ ವಿತರಣಾ ಘಟಕ ನಿರ್ಮಾಣಕ್ಕೆ ಸರ್ವೇ ನಂ.90ರಲ್ಲಿ ಎರಡು ಎಕರೆ ನೀಡುವಂತೆ ಮುನಿರಾಬಾದ್ ಜೆಸ್ಕಾಂ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಬೆಂಗಳೂರಿಗೆ ರವಾವನೆಯಾಗಿದ್ದು, ಮಂಜೂರಾದ ನಂತರ ಟೆಂಡರ್ ಕರೆಯಬೇಕಿದೆ. ವಿದ್ಯುತ್ ಘಟಕ ನಿರ್ಮಾಣವಾದಲ್ಲಿ ಕರೆಂಟ್, ನೀರಿನ ಸಮಸ್ಯೆ ನಿವಾರಣೆಯಾಗಲಿದೆ.ರಾಜಶೇಖರ್ಎಇಇ, ಜೆಸ್ಕಾಂ, ಸಂಡೂರು

ನಾರಿಹಳ್ಳ ಜಲಾಶಯದಲ್ಲಿ ನೀರಿದೆ. ಗ್ರಾಮೀಣ ವಿದ್ಯುತ್ ಯೋಜನೆಯಡಿ ನೀರು ಶುದ್ಧೀಕರಣ ಘಟಕಕ್ಕೆ ತೋರಣಗಲ್ ವಿದ್ಯುತ್ ವಿತರಣಾ ಕೇಂದ್ರದಿಂದ ಸಂಪರ್ಕ ಕೊಟ್ಟಿರುವುದೇ ಸಮಸ್ಯೆಯಾಗಿದೆ. ಅಮೃತ ಯೋಜನೆಯಡಿ 65 ಕೋಟಿ ರೂ. ಮಂಜೂರು ಆಗಿದೆ. ಹಳೆಯ ಪೈಪ್‌ಲೈನ್‌ಗಳನ್ನು ಕಿತ್ತು ಹಾಕಿ ಹೊಸದಾಗಿ ಜೋಡಿಸಲಾಗುವುದು. ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ.ಕೆ.ಜಯಣ್ಣಮುಖ್ಯಾಧಿಕಾರಿ, ಪುರಸಭೆ, ಸಂಡೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net