More

    ಹಗರಿಬೊಮ್ಮನಹಳ್ಳಿ: ತಾತ್ಸಾರ ಮಾಡಿದರೆ ಜಲಸಂಕಷ್ಟ ಖಚಿತ, ಕೆಲವೇ ದಿನಕ್ಕಾಗುವಷ್ಟಿದೆ ನೀರು, ಬನ್ನಿಗೋಳ ಜಾಕ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕುಸಿತ

    ಅಶೋಕ್ ಉಪ್ಪಾರ ಹಗರಿಬೊಮ್ಮನಹಳ್ಳಿ
    ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿವ ನೀರಿನ ಸಮಸ್ಯೆ ಕಾಣಿಸುವುದು ಸಾಮಾನ್ಯ. ಸ್ಥಳೀಯ ಆಡಳಿತ ಸಂಸ್ಥೆಗಳು ನೀರಿನ ನಿರ್ವಹಣೆ ಬಗ್ಗೆ ತಾತ್ಸಾರ ಮಾಡಿದರೆ ಪುರಸಭೆ ವ್ಯಾಪ್ತಿ ಮತ್ತು ತಾಲೂಕಿನಲ್ಲಿ ಜಲ ಸಂಕಷ್ಟ ಎದರಾಗಬಹುದು.

    ಪಟ್ಟಣದಲ್ಲಿ 23 ವಾರ್ಡ್‌ಗಳಿವೆ. ಬಹುತೇಕ ಜನರು ಶುದ್ಧ ಕುಡಿವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ 22 ಶುದ್ಧ ಕುಡಿವ ನೀರಿನ ಘಟಕಗಳಿವೆ. ಅವುಗಳಲ್ಲಿ 17 ಕೆಟ್ಟಿದ್ದು, ಏಳರಲ್ಲಿ ನೀರು ಪೂರೈಕೆಯಾಗುತ್ತಿವೆ. ಪುರಸಭೆ ಅಧಿಕಾರಿಗಳು ಘಟಕಗಳ ನಿರ್ವಹಣೆಯಲ್ಲಿ ತಾತ್ಸಾರ ಮಾಡಿದ್ದಾರೆ. ಪಟ್ಟಣದಲ್ಲಿ ಏಳು ಓವರ್ ಹೆಡ್ ಟ್ಯಾಂಕ್‌ಗಳಿದ್ದು, 20 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. 43 ಸಾವಿರ ಜನಸಂಖ್ಯೆ ಪಟ್ಟಣದಲ್ಲಿದೆ. ಪ್ರತಿ ವ್ಯಕ್ತಿಗೆ ಒಂದು ದಿನಕ್ಕೆ 90 ಲೀಟರ್‌ನಷ್ಟು ನೀರು ಅಗತ್ಯ. 23 ವಾರ್ಡ್‌ಗಳಲ್ಲಿ ಪುರಸಭೆಯ 115 ಬೋರ್‌ವೆಲ್‌ಗಳಿವೆ. ಅವುಗಳಿಂದಲೇ ಸಾರ್ವಜನಿಕ ನಳಗಳು-ಮನೆಗಳಿಗೆ ಪೂರೈಸಲಾಗುತ್ತಿದೆ. ಈ ಬಾರಿ ಅಂತರ್ಜಲಮಟ್ಟ ಹೆಚ್ಚಿದ ಹಿನ್ನೆಲೆಯಲ್ಲಿ ಬೋರ್‌ವೆಲ್‌ಗಳು ಚೆನ್ನಾಗಿ ನೀರು ನೀಡುತ್ತಿವೆ.

    ಅಲರ್ಟ್ ಆಗಬೇಕಿದೆ ಅಧಿಕಾರಿಗಳು
    ತುಂಗಭದ್ರಾ ಹಿನ್ನೀರು ಮೂಲಕ ತಾಲೂಕಿನ ಬನ್ನಿಗೋಳ ಜಾಕ್‌ವೆಲ್‌ನಿಂದ ಪಟ್ಟಣ ಮತ್ತು ಹಲವು ಹಳ್ಳಿಗಳಿಗೆ ನೀರು ಸರಬರಾಜಾಗುತ್ತಿದೆ. ಇದೀಗ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ್ದು, ಜಾಕ್‌ವೆಲ್ ಪ್ರದೇಶದಲ್ಲಿ ಕುಸಿತ ಕಾಣುತ್ತಿದೆ. ಈ ಕಾಣರಕ್ಕೆ ಈಗಾಗಲೇ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಪುರಸಭೆಯಿಂದ ಸದ್ಯಕ್ಕೆ ಐದು ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆಯಾಗುತ್ತಿದೆ. ಜಾಕ್‌ವೆಲ್ ಬಳಿ ಹದಿನೈದು ದಿನಕ್ಕಾಗುವಷ್ಟು ಮಾತ್ರ ನೀರು ಲಭ್ಯವಿದೆ ಎಂಬುದು ಅಧಿಕಾರಿಗಳು ಅಂದಾಜು. ಬನ್ನಿಗೋಳ ಜಾಕ್‌ವೆಲ್ ಬಳಿ ಬಂಡ್ ಹಾಕಿ, ಇರುವ ನದಿ ನೀರನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಂಡ್ ಹಾಕುವಲ್ಲಿ ಅಧಿಕಾರಿಗಳು ವಿಳಂಬ ಮಾಡದೆ ಶೀಘ್ರ ಕ್ರಮ ವಹಿಸಬೇಕಿದೆ.

    ಹಗರಿಬೊಮ್ಮನಹಳ್ಳಿ: ತಾತ್ಸಾರ ಮಾಡಿದರೆ ಜಲಸಂಕಷ್ಟ ಖಚಿತ, ಕೆಲವೇ ದಿನಕ್ಕಾಗುವಷ್ಟಿದೆ ನೀರು, ಬನ್ನಿಗೋಳ ಜಾಕ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕುಸಿತ
    ರಾಮನಗರದಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರುಪಯುಕ್ತವಾಗಿರುವುದು.

    ಕೈಹಿಡಿದ ಜೆಜೆಎಂ
    ತಾಲೂಕಿನಲ್ಲಿ ಜಲಜೀವನ್ ಮಿಷನ್‌ನಿಂದ ಮನೆಮನೆಗಳಿಗೆ ನಳಗಳ ಸಂಪರ್ಕ ಕಲ್ಪಿಸಿರುವುದು ಬಹುತೇಕ ಉಪಯುಕ್ತವಾಗಿದೆ. ಶೇ.60 ಕಾರ್ಯ ಪೂರ್ಣಗೊಂಡಿದ್ದು, ಕೆಲವೆಡೆ ಪ್ರಗತಿ ಹಂತದಲ್ಲಿದೆ. ಬಹುತೇಕ ಗ್ರಾಪಂ ವ್ಯಾಪ್ತಿಗಳಲ್ಲಿ ಬೋರ್‌ವೆಲ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಹಾಗೂ ಮಾಲವಿ ಜಲಾಶಯ ತುಂಬಿ ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ಹರಿಬಿಟ್ಟಿದ್ದರಿಂದ ಅಚ್ಚುಕಟ್ಟು ಪ್ರದೇಶದ ಹಳ್ಳಿಗಳ ಬೋರ್‌ವೆಲ್‌ಗಳಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದೆ.

    ಯೋಜನೆ ವ್ಯಾಪ್ತಿ ಹಳ್ಳಿಗಳಲ್ಲಿಲ್ಲ ಸಮಸ್ಯೆ
    ತಾಲೂಕಿನಲ್ಲಿ ಮೂರು ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿವೆ. ಸೊನ್ನ ಬಸರುಕೊಂಡು, ಉಪನಾಯಕನಹಳ್ಳಿ ಹಾಗೂ ದಶಮಾಪುರ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಂದ ಆಯಾ ಭಾಗದ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಸದ್ಯಕ್ಕೆ ಸಮಸ್ಯೆ ಉದ್ಭವಿಸಿಲ್ಲ. ಪ್ರತಿ ಬಾರಿ ಏಪ್ರಿಲ್‌ನಿಂದ ಜೂನ್‌ವರೆಗೆ ಅಲ್ಲಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ, ಖಾಸಗಿ ಬೋರ್‌ವೆಲ್ ಅಥವಾ ನೀರಿನ ಟ್ಯಾಂಕರ್‌ಗಳ ಮೂಲಕ ಜನರಿಗೆ ನೀರು ಪೂರೈಸಿರುವ ಉದಾಹರಣೆಗಳಿವೆ. ಈಗ ಅಂತಹ ಸಮಸ್ಯೆ ಎದುರಾಗುವುದಿಲ್ಲ ಎಂಬುದು ಗ್ರಾಮೀಣ ಕುಡಿವ ನೀರು-ನೈರ್ಮಲ್ಯ ಇಲಾಖೆ ಎಇಇ ದೀಪಾ ಹೇಳುತ್ತಾರೆ.

    ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಇರುವ ಬೋರ್‌ವೆಲ್‌ಗಳ ಮೂಲಕವೇ ನೀರು ಸರಬರಾಜು ಆಗುತ್ತಿದೆ. ಖಾಸಗಿ ಬೋರ್‌ವೆಲ್, ಟ್ಯಾಂಕರ್‌ಗಳ ಮೂಲಕ ನೀರು ತರುವ ಸ್ಥಿತಿ ಇಲ್ಲ. ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆಯಾಗದಂತೆ ಜಾಗ್ರತೆ ವಹಿಸುವಂತೆ ಸಿಇಒ ಸೂಚಿಸಿದ್ದಾರೆ.
    ಜಿ.ಪರಮೇಶ್ವರ, ತಾಪಂ ಇಒ, ಹಬೊಹಳ್ಳಿ.

    ಬನ್ನಿಗೋಳ ಜಾಕ್‌ವೆಲ್ ಬಳಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಸ್ಥಳದಲ್ಲಿ ಬಂಡ್‌ಹಾಕಿ ನೀರು ಸಂಗ್ರಹಿಸಿಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಿಂಗಟಾಲೂರು ಬ್ಯಾರೇಜ್‌ನಿಂದ 91 ದಿನಗಳವರೆಗೆ 0.68 ಟಿಎಂಸಿ ನೀರು ಬಿಡುವಂತೆ ಪತ್ರ ಬರೆಯಲಾಗಿದೆ. ಹಿಂದಿನ ವರ್ಷ ನೀರಿನ ಸಮಸ್ಯೆ ಆಗಿರಲಿಲ್ಲ. ಈ ಬಾರಿ ನದಿಯ ಹಿನ್ನೀರು ಪ್ರದೇಶದಲ್ಲಿ ಬೇಗನೇ ನೀರು ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ.
    ಮಲ್ಲಿಕಾರ್ಜುನ ಪಾಟೀಲ್, ಎಇಇ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೊಸಪೇಟೆ ವಿಭಾಗ.

    ಬನ್ನಿಗೋಳ ಜಾಕ್‌ವೆಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಹದಿನೈದು ದಿನ ನೀರು ಪೂರೈಕೆಗೆ ಕೊರತೆ ಇಲ್ಲ. ಪಟ್ಟಣದಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು. ನೀರಿನ ಘಟಕಗಳನ್ನು ಸುಸ್ಥಿತಿಗೊಳಿಸಲಾಗುವುದು.
    ಪ್ರಭಾಕರ್ ಪಾಟೀಲ್, ಮುಖ್ಯಾಧಿಕಾರಿ, ಹಬೊಹಳ್ಳಿ ಪುರಸಭೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts