More

    ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಬೇಸಿಗೆ ಶಿಬಿರ ಸಹಕಾರಿ

    ಚಾಮರಾಜನಗರ :ಜಿಲ್ಲೆಯ ಜಾನಪದ ಸಂಸ್ಕೃತಿಯನ್ನು ಕಥೆ, ನಾಟಕ, ಸಾಹಿತ್ಯದ ರೂಪದಲ್ಲಿ ತಿಳಿಸಿಕೊಡುವ ಬೇಸಿಗೆ ಶಿಬಿರಗಳು ಮಕ್ಕಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಜನಪರ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಮಹೇಶ್ ಚಿಕ್ಕಲ್ಲೂರು ತಿಳಿಸಿದರು.

    ನಗರದ ಶ್ರೀಭುವನೇಶ್ವರಿ ವೃತ್ತದಲ್ಲಿರುವ ಸಂತ ಜೋಸೆಫರ ಶಾಲೆಯ ಸಭಾಂಗಣದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಮತ್ತು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಆಡು ಬಾ ಕಂದ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮಕ್ಕಳಿಗೆ ಜಾನಪದ ಗೀತೆ, ಭಕ್ತಿಗೀತೆ, ಚಿತ್ರಕಲೆ, ಅಭಿನಯ, ನಾಟಕಗಳನ್ನು ಕಲಿಸಿದರೆ ಮಕ್ಕಳಲ್ಲಿ ಬೌದ್ಧಿಕ ಬೆಳವಣಿಗೆ ವೃದ್ಧ್ಧಿಯಾಗುತ್ತದೆ. ಹಿರಿಯರನ್ನು ಗೌರವಿಸುವುದಕ್ಕೆ, ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
    ಪ್ರಪಂಚದಲ್ಲಿ ತಂತ್ರಜ್ಞಾನ ಹೆಚ್ಚಾಗುತ್ತಿದೆ. ಮಕ್ಕಳು ಮೊಬೈಲ್ ಜಗತ್ತಿನಲ್ಲಿ ಮುಳುಗಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ವಾಸ್ತವ ಜಗತ್ತನ್ನು ಹಾಗೂ ಜೀವನ ಶೈಲಿಯನ್ನು ತಿಳಿಸಿಕೊಡಲು ಇಂತಹ ಬೇಸಿಗೆ ಶಿಬಿರಗಳು ತುಂಬ ಸಹಕಾರಿಯಾಗಿದೆ. ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಇಂತಹ ರಂಗಸಂಸ್ಥೆಗಳು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

    ಸಮಾಜಸೇವಕ ಪಿ.ಮನೋರಾಜ್ ಮಾತನಾಡಿ, ಮಕ್ಕಳು ನಿಜವಾದ ದೇವರು. ಅವರ ಜತೆಯಲ್ಲಿ ಕಾಲ ಕಳೆದರೆ ನಮ್ಮ ಆರೋಗ್ಯ ವೃದ್ಧಿಸುತ್ತದೆ. ಮಕ್ಕಳಿಗೆ ಪಠ್ಯ ಚಟುವಟಿಕೆಯ ಜತೆ ಕಲೆಯು ಸೇರಿಕೊಂಡರೆ ಅವರ ಜೀವನಕ್ಕೆ ದಾರಿಯಾಗಲಿದೆ ಎಂದರು.

    ಸಂತ ಜೋಸೆಫರ ಮಹಿಳಾ ಅಭಿವೃದ್ಧಿ ಕೇಂದ್ರ ಆಡಳಿತಾಧಿಕಾರಿ ಸಿಸ್ಟರ್ ಮರಿಯಾ ಜೋಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮನೆಗಳು ಸಂಸ್ಕಾರಗಳನ್ನು ತಿಳಿಸಿಕೊಡುವ ಪಾಠಶಾಲೆಯಾಗಬೇಕು. ಸ್ವಾರ್ಥ ಪ್ರಪಂಚದಲ್ಲಿ ಯುವಕರು ತಮ್ಮ ತಮ್ಮ ಬಗ್ಗೆ ಯೋಚಿಸುತ್ತಿರುವ ಈ ದಿನಗಳಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್, ಮಕ್ಕಳಿಗಾಗಿ ಇಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
    ಶಿವು ಜನ್ನೂರು ಹೊಸೂರು ರಚನೆ, ನಿರ್ದೇಶನದ ಕುಬೇರನ ಔತಣ ಎಂಬ ಪೌರಾಣಿಕ ನಾಟಕವನ್ನು ಶಿಬಿರದ ಮಕ್ಕಳು ಅಮೋಘವಾಗಿ ಪ್ರದರ್ಶನ ಮಾಡಿದರು.

    ಕಾರ್ಯಕ್ರಮದಲ್ಲಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಅಧ್ಯಕ್ಷ ಶಿವು ಜನ್ನೂರು ಹೊಸೂರು, ಶಿಬಿರ ವ್ಯವಸ್ಥಾಪಕ ಶಿವಶಂಕರ ಎನ್.ಚಟ್ಟು, ಕಾರ್ಯದರ್ಶಿ ಜೇಮ್ಸ್ ದೇಶವಳ್ಳಿ, ನವೀನ್ ಉಡಿಗಾಲ, ಮಧುಸೂದನ್ ಹೊಸೂರು, ನಂದಿನಿ ರವಿಕುಮಾರ್, ಗೌರಿರಾಮಕೃಷ್ಣ, ಮುತ್ತುರಾಜ್, ಮಲ್ಲೇಶ್, ಸುರೇಶ್, ಮಹೇಶಪ್ಪ, ಕಾಂತರಾಜು ಕುಪ್ಪೆ, ವಕೀಲ ಶಿವರಾಮ್, ಸಾಹಿತಿ ಸೋಮಶೇಖರ್ ಬಿಸಲ್ವಾಡಿ, ಆತ್ಮೀಯ ಟ್ರಸ್ಟ್ ಕಲಾವಿದರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts