

ಸಂಡೂರು: ಮಕ್ಕಳಿಗೆ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ತಿಳಿಸಿದರೆ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಕೆಎಲ್‌ಇ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಬಿ.ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು. ಆತ್ಮ, ಕಾನೂನು, ಸಾಮಾಜಿಕ ಭಯದಿಂದ ಆತ್ಮವಂಚನೆ ಮಾಡಿಕೊಳ್ಳಲಾರದೆ ಶಿಕ್ಷಕರು ಸಹಿತ ಸದ್ಗುಣಿಗಳಾಗಬೇಕು ಎಂದರು.
ಶಾಸಕ ಈ.ತುಕಾರಾಮ್ ಮಾತನಾಡಿ, ತಾಲೂಕಿನಲ್ಲಿ 406 ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಮುಂದಿನ ದಿನಗಳಲ್ಲಿ ಭರ್ತಿ ಮಾಡಲಾಗುವುದು. ಎಪಿಎಂಸಿ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂದು ಕೋಟಿ ರೂ.ವೆಚ್ಚ ಮಾಡಿ ಮಾಜಿ ರಾಷ್ಟ್ರಪತಿ ಎಸ್.ರಾಧಾಕೃಷ್ಣನ್ ಅವರ ಹೆಸರಲ್ಲಿ ಒಂದು ಮ್ಯೂಸಿಯಂ ನಿರ್ಮಿಸಲಾಗುವುದು. ಅಲ್ಲಿ ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಿಗಳು ಸೇರಿದಂತೆ ಉನ್ನತ ವ್ಯಕ್ತಿಗಳ ಜೀವನ ಕುರಿತ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಪ್ರಭು ಸ್ವಾಮೀಜಿ, ತಹಸೀಲ್ದಾರ್ ಜಿ.ಅನಿಲ್‌ಕುಮಾರ್, ತಾಪಂ ಇಒ ಎಚ್.ಷಡಕ್ಷರಯ್ಯ, ಬಿಇಒ ಡಾ.ಐ.ಆರ್.ಅಕ್ಕಿ, ಕಸಾಪ ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿದರು. ಬಿ.ಎಂ.ಪ್ರಕೃತಿ ಅವರು ಬರೆದ ಕಥೆ, ಕವನ ಪುಸ್ತಕ ಬಿಡುಗಡೆ ಮಾಡಲಾಯಿತು. ಶಿಕ್ಷಕರು ಬರೆದ ಕವನ ಸಂಕಲನಗಳನ್ನು ಬಿಕೆಜಿ ಫೌಂಡೇಷನ್‌ನಿಂದ ಬಿಡುಗಡೆ ಮಾಡಲಾಯಿತು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.