

ಸಂಡೂರು: ಸಾರ್ವಜನಿಕರು ವೈಯಕ್ತಿಕ ಹಾಗೂ ಸಮುದಾಯಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಹಸೀಲ್ದಾರ್ ಜಿ.ಅನಿಲ್ ಕುಮಾರ್ ಹೇಳಿದರು.
ಸ್ವಚ್ಛ ಭಾರತ್ ಮಿಷನ್‌ನಡಿ ಪಟ್ಟಣದ ಸದ್ವಿದ್ಯಾ ಪದವಿ ಕಾಲೇಜಿನಲ್ಲಿ ಪುರಸಭೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸುಸ್ಥಿರ ಅಭಿವೃದ್ಧಿ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ಕಸ ವಿಲೇವಾರಿ, ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆಗೆ ಎಲ್ಲರೂ ಮನಸ್ಸು ಮಾಡಬೇಕು ಎಂದರು.
ಪುರಸಭೆಯ ಪರಿಸರ ಇಂಜಿನಿಯರ್ ಅನ್ನಪೂರ್ಣ ಮಾತನಾಡಿ, ಮೂಲದಲ್ಲಿ ತ್ಯಾಜ್ಯ ವಿಂಗಡಣೆ ವಿಧಾನ ಮತ್ತು ಅದರಿಂದಾಗುವ ಅನುಕೂಲ, ಸಮಯ, ಶ್ರಮದ ಉಳಿತಾಯ, ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿದರು.
ಇದನ್ನೂ ಓದಿ: ಮನೋವೈದ್ಯರಿಂದ ಸ್ವಸ್ಥ ಸಮಾಜ ನಿರ್ಮಾಣ
ಗಣಪತಿ ಹಬ್ಬ ಸಮೀಪಿಸುತ್ತಿದ್ದು, ಗಣಪತಿ ತಯಾರಕರು ಮತ್ತು ಮಾರಾಟಗಾರರು ಪಿಒಪಿ ಗಣಪತಿ ಮಾರಾಟ ಮಾಡುವಂತಿಲ್ಲ. ತಯಾರಿಸಿ ಮಾರಲು ಯತ್ನಿಸಿದಲ್ಲಿ ಗಣಪತಿ ಮೂರ್ತಿಗಳನ್ನು ಜಪ್ತಿ ಕಾನೂನು ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಅಧಿಕಾರಿ ಶಿವರಂಜಿನಿ ಮಾತನಾಡಿದರು. ಪ್ರಮುಖರಾದ ಎಚ್.ಶಾಂತಾ, ಚಿದಂಬರ ನಾನಾವಟೆ, ಪ್ರಶಾಂತ ಹಿರೇಮಠ, ವಿಶ್ವಮೂರ್ತಿ, ಕಾಲೇಜಿನ ಪ್ರಾಚಾರ್ಯ ರಾಘವೇಂದ್ರ ಇತರರಿದ್ದರು.