

ಶಿವಮೊಗ್ಗ: ಸಮಾಜದ ಸ್ವಾಸ್ಥ ್ಯ ಕಾಪಾಡುವಲ್ಲಿ ಮನೋವೈದ್ಯರು ಮತ್ತು ಸಿಬ್ಬಂದಿ ಪಾತ್ರ ಮಹತ್ತರವಾದುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್ ಘಟಕದ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಇಡೀ ಸಮಾಜ ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭದಲ್ಲೂ ವೈದ್ಯರು ಕೆಲಸ ಮಾಡುತ್ತಾರೆ. ಕರೊನಾ ಸಂದರ್ಭದಲ್ಲಿ ಯಾರೂ ಕಲ್ಪನೆ ಮಾಡದ ರೀತಿಯಲ್ಲಿ ಆರೋಗ್ಯ ಸಮಸ್ಯೆ ಉಂಟಾದಾಗ ವೈದ್ಯರು ಹಗಲಿರುಳು ಶ್ರಮಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ವೃತ್ತಿಪರತೆ ಮೆರೆದಿದ್ದಾರೆ ಎಂದರು.
ನಾನಾ ತರಹದ ಒತ್ತಡಗಳು ಜೀವನದಲ್ಲಿ ಬರುತ್ತವೆ. ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಕೆಲವರು ದಾಸರಾಗುತ್ತಾರೆ. ಇದರಿಂದ ಅವರ ಕುಟುಂಬ ತೊಂದರೆಗೊಳಗಾಗುತ್ತದೆ. ಈ ಸಂದರ್ಭದಲ್ಲಿ ಮಾನಸಿಕ ತಜ್ಞರ ಸಲಹೆ ಅತಿ ಮುಖ್ಯ. ನೈತಿಕ ಧೈರ್ಯ ತುಂಬಿ ರೋಗಿ ಮತ್ತು ಅವರ ಕುಟುಂಬಕ್ಕೆ ಸೂಕ್ತ ಸಲಹೆಯನ್ನು ಮಾನಸಿಕ ತಜ್ಞರು ನೀಡಬೇಕೆಂದರು.
ಕಟೀಲು ಅಶೋಕ ಪೈ ಸ್ಮಾರಕ ಕಾಲೇಜು ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡು ಮಾದರಿಯಾಗಿದೆ. ಡಾ.ಅಶೋಕ್ ಪೈ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಮಾನಸಿಕ ಆರೋಗ್ಯದ ಬಗ್ಗೆ ಮಾಧ್ಯಮ ಹಾಗೂ ಚಲನಚಿತ್ರಗಳ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಈಗ ಅವರ ಕನಸಿನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕೂಡ ಸಾಧನೆಯತ್ತ ಮುನ್ನುಗ್ಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಮಾನಸ ಟ್ರಸ್ಟ್ ನಿರ್ದೇಶಕಿ ಡಾ.ರಜನಿ ಪೈ, ಶೈಕ್ಷಣಿಕ ನಿರ್ದೇಶಕಿ ಡಾ.ಪ್ರೀತಿ ವಿ.ಶಾನುಭಾಗ್, ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ, ಪ್ರಮುಖರಾದ ಪ್ರೊ.ರಾಜೇಂದ್ರ ಚೆನ್ನಿ, ಡಾ.ಸುಕೀರ್ತಿ, ರಾಬರ್ಟ್ ರಾಯಪ್ಪ, ಮಂಜುನಾಥ ಸ್ವಾಮಿ ಇತರರಿದ್ದರು.