

ಸಂಡೂರು: ತಾಲೂಕಿನ ಅಂತಾಪುರದ 535 ಎಕರೆ ಭೂಮಿಯಲ್ಲಿ ಹೊಸದಾಗಿ ಆರಂಭವಾಗಲಿರುವ ಮೆ.ಎಪ್ಸಿಲಾನ್ ಕಂಪನಿಯ ಪ್ಲಾಂಟ್ ವಿಚಾರವಾಗಿ ಮಂಗಳವಾರ ಅಪರ ಜಿಲ್ಲಾಧಿಕಾರಿ ಮಹ್ಮದ್ ಜುಬೇರ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಪರ-ವಿರೋಧ ವ್ಯಕ್ತವಾಯಿತು.
ಗ್ರಾಪಂ ಸದಸ್ಯ ವಿಠಲಾಪುರ ಎಂ.ತಿರುಮಲ ಮಾತನಾಡಿ, ವಿವಿಧ ಕಂಪನಿಗಳ ಒಳಗೆ ಮತ್ತು ಹೊರಗಡೆ ನಡೆಯುವ ಅವಘಡ-ಅಪಘಾತಗಳಲ್ಲಿ ಈವರೆಗೆ 20ಕ್ಕೂ ಹೆಚ್ಚು ಸಿಬ್ಬಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಡ್ಡು ಕೊಡಬಹುದು ಜೀವ ಕೊಡುವುದಕ್ಕೆ ಆಗತ್ತದಾ ಎಂದು ಪ್ರಶ್ನಿಸಿದರು. ಸುಲ್ತಾನ್‌ಪುರದಲ್ಲಿ ಮನೆ ಬಾಡಿಗೆ ಪಡೆದು ಅಧಿಕಾರಿಗಳು ಇದ್ದರೆ ಗೊತ್ತಾಗುತ್ತದೆ. ಅಲ್ಲಿನ ಕಪ್ಪು ಧೂಳು, ಲಾರಿಗಳ ಆರ್ಭಟಕ್ಕೆ ಜನ ನರಕಯಾತನೆ ಅನುಭವಿಸುತ್ತಾರೆ. ಅಸಮಪರ್ಕ ವಿದ್ಯುತ್ ಪೂರೈಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂದ್ ಚಿಕ್ಕಂತಾಪುರ ಮಾತನಾಡಿ, ಡಿಸಿಗೆ ಹಾಕಿದ ಮೆಸೇಜ್ ಕಂಪನಿಯವರಿಗೆ ಹೇಗೆ ಗೊತ್ತಾಗುತ್ತೆ. ಸಂದೇಶ ಹಾಕಿದ 20ನಿಮಿಷಗಳಿಗೆ ಕಾಲ್ ಮಾಡಿ ನಾಗರಾಜ್ ಎಂಬ ವ್ಯಕ್ತಿ ಬೆದರಿಕೆ ಹಾಕುತ್ತಾನೆ. ಸಿಪಿಐ, ಪಿಎಸ್‌ಐಗಳಿದ್ದೀರಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಅಂತಾಪುರ ಶಂಕರ್, ಎಂ.ಟಿ.ತಿಮ್ಮಪ್ಪ ಇತರರು ದನಿಗೂಡಿಸಿದರು. ಜಿಪಂ ಮಾಜಿ ಸದಸ್ಯ ಟಿ.ಲಕ್ಷ್ಮಣ ಮಾತನಾಡಿ, ಅಂತಾಪುರ, ವಿಠಲಾಪುರ, ರಾಜಾಪುರ, ಮೆಟ್ರಿಕಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬರ ಆವರಿಸಿದೆ. ಇಲ್ಲಿನ ರೈತರ ಭೂಮಿಗೆ ಒಳ್ಳೆ ಬೆಲೆ ನಿಗದಿಪಡಿಸಿ, ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಶರಣಯ್ಯ ಸ್ವಾಮಿ ಸೇರಿ ಹಲವರು ಕಂಪನಿ ಪರವಾಗಿ ಮಾತನಾಡಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ದೊಡ್ಡ ಶಾಣಯ್ಯ, ಮುರಳೀಧರ, ಕಂಪನಿಯ ಸಿಇಒ ಸಾಯಿಪ್ರಸಾದ್ ಜಾಧವ್, ಪ್ಲಾಂಟ್ ಹೆಡ್ ಮಹೇಶ್ ತೋಡ್ಕರ್, ಜಿಎಂಪಿಆರ್ ಸಚಿನ್ ಪಾಟೀಲ್, ಸಹಾಯಕ ಪರಿಸರ ಅಧಿಕಾರಿಗಳಾದ ಹನುಮಂತಪ್ಪ ಕೊಪ್ಪದ್, ಡಾ.ಬಿ.ಶ್ವೇತಾ ಇದ್ದರು.