ಅಕ್ಕಮಹಾದೇವಿ ವಚನಗಳು ಸಮಾಜಕ್ಕೆ ದಾರಿದೀಪ: ಶಿಕ್ಷಕ ಜಿ.ಎಂ.ಪ್ರದೀಪ್ ಕುಮಾರ್ ಅಭಿಪ್ರಾಯ

Sandur Kadli Vedike
ಸಂಡೂರು ತಾಲೂಕಿನ ಶ್ರೀಶೈಲೇಶ್ವರ ಶಾಲೆಯಲ್ಲಿ ಏರ್ಪಡಿಸಿದ್ದ ಮಹಾಮನೆ ಕಾರ್ಯಕ್ರಮ ಹಾಗೂ ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆಯನ್ನು ಶಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ ಉದ್ಘಾಟನೆ ಮಾಡಿದರು. ಪ್ರಮುಖರಾದ ಪ್ರಭು ಸ್ವಾಮೀಜಿ, ಕೆ.ಬಿ.ಸಿದ್ದಲಿಂಗಪ್ಪ, ಕುಮಾರ ನಾನಾವಟೆ, ನಾಡೋಜ ಡಾ.ವಿ.ಟಿ.ಕಾಳೆ, ಸವಿತಾ ಅನಂದ್ ಇದ್ದರು.
Published on

ಸಂಡೂರು: ಪ್ರಾಪಂಚಿಕ ಬದುಕಿನ ಅಹಂಕಾರ, ಮಮಕಾರ ಮತ್ತು ವಿಕಾರಗಳನ್ನು ಆತ್ಮಶಕ್ತಿಯಿಂದ ಜಯಿಸಿದವರು ಮಹಾನ್ ಚೇತನ ವ್ಯೆರಾಗ್ಯ ನಿಧಿ ಅಕ್ಕಮಹಾದೇವಿ ಎಂದು ಶಿಕ್ಷಕ ಜಿ.ಎಂ.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಶರಣ ಸಾಹಿತ್ಯ ಪರಿಷತ್ ಬಳ್ಳಾರಿ ಹಾಗೂ ಸಂಡೂರು ತಾಲೂಕು ಘಟಕ ಏರ್ಪಡಿಸಿದ್ದ ಮಹಾಮನೆ ಹಾಗೂ ಬಳ್ಳಾರಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಉಪನ್ಯಾಸ ನೀಡಿದರು. ಅಧ್ಯಾತ್ಮ, ಆತ್ಮ ಚಿಂತನೆ, ಸಮಾನತೆ ಮತ್ತು ಸ್ವತಂತ್ರವಾಗಿ ವಿಚಾರ ಮಾಡುವ ಅಭಿವ್ಯಕ್ತಿಗೆ ನಾಂದಿ ಹಾಡಿ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ.

ಹೆಣ್ಣಾಗಿ ಹುಟ್ಟಿ ವಿರಕ್ತಿಯಾಗಿ ಅನುಭವಿಯಾಗಿ ಬಾಳಿದ ಅಕ್ಕನ ಬದುಕು ಒಂದು ಅಚ್ಚರಿ. ಲೋಕದೊಳಗಿದ್ದು ಲೋಕೋತ್ತರವಾಗಿ ಬೆಳೆದ ಅಕ್ಕಮಹಾದೇವಿ ವ್ಯಕ್ತಿತ್ವ ಸಿದ್ಧಿಯ ದಿವ್ಯ ಪ್ರಭೆಯನ್ನು ಅವರ ವಚನಗಳಲ್ಲಿ ಗ್ರಹಿಸಬಹುದು. ಒಂದೊಂದು ವಚನ ಇಂದಿನ ಕಲುಷಿತ ಸಮಾಜಕ್ಕೆ ದಾರಿದೀಪಗಳಾಗಿದ್ದು, ಅಕ್ಕನ ಹೆದ್ದಾರಿಯಲ್ಲಿ ಅವಳ ಅನುಭವ ಪಥದ ಬೆಳಕಿನೊಂದಿಗೆ ನಾವು ಬದುಕು ರೂಪಿಸಿಕೊಳ್ಳಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಪ್ರಭು ಸ್ವಾಮೀಜಿ, ಜಿಲ್ಲಾ ಶಸಾಪ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ, ಶ್ರೀಶೈಲೇಶ್ವರ ವಿದ್ಯಾಕೇಂದ್ರದ
ಆಡಳಿತಾಧಿಕಾರಿ ಕುಮಾರ ನಾನಾವಟೆ, ನಾಡೋಜ ಡಾ.ವಿ.ಟಿ.ಕಾಳೆ, ಶಸಾಪ ಅಧ್ಯಕ್ಷ ಬಿ.ನಾಗನಗೌಡ ಮಾತನಾಡಿದರು.

ವಿಜಯನಗರ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅದ್ಯಕ್ಷೆ ಹಗರಿಬೊಮ್ಮನಹಳ್ಳಿ ಸವಿತಾ ಅನಂದ್, ಬಳ್ಳಾರಿ ವೇದಿಕೆ ಅಧ್ಯಕ್ಷೆ ನಿಲಾಂಬಿಕೆ, ಅಂಕಮನಾಳ್ ಶಾಂತಮ್ಮ, ಪ್ರೇಮಲೀಲಾ, ಸುಮಿತ್ರಮ್ಮ ಹೊಳಗುಂದಿ, ಸವಿತಾ ಚಿತ್ರಿಕಿ, ಬಂಡೆ ಮಾಗಳ ಆಶಾ, ಆರ್.ಬಿ.ಸುನಂದಾ, ಸೋವೇನಹಳ್ಳಿ ಎ.ಎಂ.ಶಿವಮೂರ್ತಿ ಸ್ವಾಮಿ ಇತರರಿದ್ದರು. ಭುಜಂಗನಗರದ ತಾಯಪ್ಪ, ಭರತ್ ರೆಡ್ಡಿ, ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net