More

    ವಿರಕ್ತ ಜ್ಯೋತಿ ಅಕ್ಕಮಹಾದೇವಿ; ಶ್ರೀಶೈಲದಲ್ಲಿ ಸ್ಮಾರಕ ನಿರ್ಮಾಣ

    ವಿರಕ್ತಿ, ವೈರಾಗ್ಯ ಎಂಬುದು ಅಷ್ಟು ಸುಲಭದ ಮಾತಲ್ಲ. ಹಲವಾರು ವರ್ಷಗಳ ತಪಸ್ಸು, ತ್ಯಾಗದಿಂದ ಮಾತ್ರ ಸಾಧ್ಯ. ಆದರೆ ಕಿರಿಯ ವಯಸ್ಸಿನಲ್ಲೇ ಸಂಸಾರವೆಂಬ ವ್ಯಾಮೋಹವನ್ನು ಕಿತ್ತೆಸೆದು, ನಿರಾಡಂಬರದ ಕನ್ನಡಿಯಾಗಿ ಕರುನಾಡನ್ನು ಬೆಳಗಿದ ಕನ್ನಡದ ಪ್ರಥಮ ಕವಯತ್ರಿ, ಶರಣ ಸಮೂಹಕ್ಕೆಲ್ಲಾ ಸಹೋದರಿ ಎನಿಸಿದ ಅಕ್ಕಮಹಾದೇವಿಯ ಜಯಂತಿ ಇಂದು.

    | ಪ್ರಶಾಂತ ರಿಪ್ಪನ್​ಪೇಟೆ

    ಬನದ ಹುಣ್ಣಿಮೆಯ ಪವಿತ್ರ ಪರ್ವಕಾಲದಲ್ಲಿ ಜನಿಸಿದ ಮಹಾದೇವಿಯಕ್ಕನ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ. ಬಾಲಕಿಯಾಗಿದ್ದಾಗಲೇ ಇದ್ದ ಆಧ್ಯಾತ್ಮಿಕ ಆಸಕ್ತಿಗೆ ನೀರೆರೆದು ಪೋಷಿಸಿದ ಶ್ರೀಶೈಲ ಕ್ಷೇತ್ರದ ಬಗ್ಗೆ ಅಗಾಧ ಜ್ಞಾನ ಮತ್ತು ಅಪಾರ ಭಕ್ತಿ-ಶ್ರದ್ಧೆಯನ್ನು ಹೊಂದಿದ್ದ ಶ್ರೀ ಗುರುಲಿಂಗದೇವ ಮಹಾಸ್ವಾಮಿಗಳು ನೀಡಿದ ಉಪದೇಶ ಹಾಗೂ ಇಷ್ಟಲಿಂಗ ದೀಕ್ಷೆ ಅಕ್ಕನ ಬದುಕಿನ ದಿಕ್ಕನ್ನು ಬದಲಿಸಿತು. 12ನೇ ಶತಮಾನ ಕರ್ನಾಟಕ ಮಾತ್ರವಲ್ಲ, ಇಡೀ ಜಗತ್ತಿಗೆ ಹೊಸ ಆಧ್ಯಾತ್ಮದ ಬೆಳಕನ್ನು ತೋರಿದ ಕಾಲಘಟ್ಟ. ಭಕ್ತಿಭಂಡಾರಿ ಬಸವಣ್ಣನವರ ಮುಂದಾಳತ್ವದಲ್ಲಿ, ಅಲ್ಲಮರಂತಹ ಮಹಾತತ್ವಜ್ಞಾನಿಗಳ ಅಧ್ಯಕ್ಷತೆಯಲ್ಲಿ ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಅನುಭವ ಮಂಟಪದ ಸಕ್ರಿಯ ಸದಸ್ಯೆ ಅಕ್ಕಮಹಾದೇವಿ. ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮರಂತಹ ಮಹಾನ್ ಶರಣರ ಪರಿಪರಿಯ ಪರೀಕ್ಷೆಗಳನ್ನು ಗೆದ್ದು, ಸರ್ವಮಾನ್ಯಳಾಗಿ ಅನುಭವ ಮಂಟಪದಲ್ಲಿ ಕುಳಿತು ತತ್ವಚಿಂತನೆಯಲ್ಲಿ ತೊಡಗಿದ ಅಕ್ಕನ ವಚನಗಳು ಆಕೆಯ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತವೆ.

    ‘ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಭಾವಿಗಳುಂಟು, ಶಯನಕ್ಕೆ ಪಾಳು ದೇಗುಲಗಳುಂಟು, ಆತ್ಮಸಂಗಾತಕ್ಕೆ ನೀ ಎನಗುಂಟಯ್ಯ ಚೆನ್ನಮಲ್ಲಿಕಾರ್ಜುನ ದೇವ’ ಎಂಬ ವಚನ ಅಕ್ಕಮಹಾದೇವಿಯ ವಿರಕ್ತಿಯ ಉತ್ತುಂಗ ಸ್ಥಿತಿಯನ್ನು ತೋರುತ್ತದೆ. 21ನೇ ಶತಮಾನದಲ್ಲೂ ಮಹಿಳೆಯರು ಪುರುಷಪ್ರಧಾನ ಸಮಾಜದಲ್ಲಿ ನಡೆಯುವ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದು ಅಷ್ಟು ಸುಲಭದ ಮಾತಲ್ಲ; ಆದರೆ 12ನೇ ಶತಮಾನದಲ್ಲೇ ಲೌಕಿಕ ಬಯಕೆಯಿಂದ ಕೈಹಿಡಿದ ಕೌಶಿಕ ಮಹಾರಾಜನ ಸಂಬಂಧ ಮತ್ತು ಆತನ ಹಂಗಿನ ಒಂದೆಳೆ ನೂಲನ್ನೂ ಇಟ್ಟುಕೊಳ್ಳದಂತೆ ಕಿತ್ತೆಸೆದು ಬಂದ ಧೀರ ಮಹಿಳೆ ಅಕ್ಕಮಹಾದೇವಿ. ಲೌಕಿಕ ಸಂಬಂಧಗಳನ್ನು ಕಳೆದುಕೊಂಡ ಅಕ್ಕ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನೇ ತನ್ನ ಪತಿ ಎಂದು ಭಾವಿಸಿಕೊಂಡು ಆತನನ್ನು ಸೇರುವುದಕ್ಕಾಗಿ ಶ್ರೀಶೈಲಕ್ಕೆ ಹೋಗಿ, ಅಲ್ಲಿಯೇ ಕದಳೀವನದಲ್ಲಿ ಐಕ್ಯಳಾಗುತ್ತಾಳೆ.

    ತಪೋರತ್ನಂ ಕರುಣಾದೇವಿ ಮಾತೆ: ಅಕ್ಕಮಹಾದೇವಿ ಐಕ್ಯರಾದ ಶ್ರೀಶೈಲವು ಅನೇಕ ಸಾಧಕರಿಗೆ, ಶರಣರಿಗೆ, ಸಂತ-ಮಹಾಂತರಿಗೆ ಆಧ್ಯಾತ್ಮದ ಅನುಸಂಧಾನ ಕರುಣಿಸಿದ ಯೋಗಭೂಮಿ. ಯುಗಯುಗಗಳ ಇತಿಹಾಸ ಹೊಂದಿರುವ ಶ್ರೀಶೈಲದಲ್ಲಿ ಅಸಂಖ್ಯಾತ ಸಾಧಕರು ತಮ್ಮ ಅಲೌಕಿಕ ಗುರಿ ಸಾಧನೆ ಮಾಡಿದ್ದಾರೆ. ಆ ಹಾದಿಯಲ್ಲಿ ಅಕ್ಕಮಹಾದೇವಿಯ ಚೈತನ್ಯ ಶಕ್ತಿಯಿಂದ ಪ್ರೇರಿತರಾಗಿ ಆಧ್ಯಾತ್ಮಸಾಧನೆ ಮೂಲಕ ಇತ್ತೀಚಿನ ದಿನಗಳಲ್ಲಿ ಎಲ್ಲರ ಗಮನ ಸೆಳೆದಿರುವವರು ಪೂಜ್ಯ ಕರುಣಾದೇವಿ ಮಾತೆಯವರು. ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರು ಗ್ರಾಮದ ಶರಣಮ್ಮ ಮತ್ತು ಮಲ್ಲಿಕಾರ್ಜುನ ಸ್ವಾಮಿಗಳ ಪುಣ್ಯಸಂಜಾತರಾದ ಕರುಣಾದೇವಿಯಕ್ಕ, ಬಾಲ್ಯದಲ್ಲಿಯೇ ಶಿವಯೋಗ ಸಾಧನೆಯಲ್ಲಿ ತೊಡಗಿದ ಆಧ್ಯಾತ್ಮ ಸಾಧಕಿ. ಪೂಜೆ, ಜಪ, ಧ್ಯಾನ, ಅನುಷ್ಠಾನದಲ್ಲಿ ಉತ್ಕಟ ಆಸಕ್ತಿ ಹೊಂದಿದ್ದ ಮಾತಾಜಿ, ಅಕ್ಕಮಹಾದೇವಿಯ ವಚನಗಳಿಂದ ಪ್ರೇರಿತರಾದ ಸಾಧಕರು. ಅಕ್ಕನ ಆದರ್ಶಗಳನ್ನು ಮೈಗೂಡಿಸಿಕೊಂಡು, ಶರಣ ಮಾರ್ಗದಲ್ಲಿ ಮುಂದುವರೆಯುತ್ತಾ ಶ್ರೀಗಿರಿ ಮಲ್ಲಯ್ಯನ ಸಾನಿಧ್ಯಕ್ಕೆ ಬರುತ್ತಾರೆ. ಇಂದಿನ ದಿನಮಾನದಲ್ಲೂ ಕದಳೀವನಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಅಲ್ಲಿ ಉಳಿಯುವುದಂತೂ ಕಲ್ಪನೆಗೂ ಸಾಧ್ಯವಿಲ್ಲ. ಆದರೆ 1992ರಲ್ಲಿ ಕದಳೀವನದಲ್ಲಿ 51 ದಿನಗಳ ಘೊರ ತಪೋನುಷ್ಠಾನವನ್ನು ಕರುಣಾದೇವಿಯಕ್ಕ ಕೈಗೊಂಡಿದ್ದರು. ಕಾಡುಮೃಗಗಳಿಂದ ಕೂಡಿರುವ ಘೊರಾರಣ್ಯದಲ್ಲಿ ಆಹಾರ, ನಿದ್ದೆ, ಭಯವನ್ನು ತ್ಯಜಿಸಿ, ಮಾಡಿದ ಅನುಷ್ಠಾನ ಆಂಧ್ರಪ್ರದೇಶ, ಕರ್ನಾಟಕದ ಬಹುಜನರ ಗಮನ ಸೆಳೆಯುತ್ತದೆ. ಅಂದು ಅವರು ಮಾಡಿದ ಸಂಕಲ್ಪದ ಫಲವೇ ಶ್ರೀ ಅಕ್ಕಮಹಾದೇವಿ ಚೈತನ್ಯ ಕೇಂದ್ರದ ಸ್ಥಾಪನೆ. ಈವರೆಗೆ ಶ್ರೀಶೈಲ, ಕಾಶಿ, ಕೇದಾರ ಸೇರಿದಂತೆ ವಿವಿಧ ತಪೋಕ್ಷೇತ್ರಗಳಲ್ಲಿ 55ಕ್ಕೂ ಹೆಚ್ಚು ತಪೋನುಷ್ಠಾನಗಳನ್ನು ಪೂರೈಸಿರುವ ಕರುಣಾದೇವಿ ಮಾತೆಯವರ ಆಧ್ಯಾತ್ಮ ಸಾಧನೆಗೆ ಎಂಥವರೂ ತಲೆಬಾಗಲೇಬೇಕು. ಇವರ ತಪಃಶಕ್ತಿಗೆ ಕಾಶೀ ಜಗದ್ಗುರುಗಳು ತಪೋರತ್ನಂ ಎಂಬ ಬಿರುದು ನೀಡಿ ಆಶೀರ್ವದಿಸಿದ್ದಾರೆ. ಉತ್ತಮ ಸಾಹಿತಿ, ಕವಯತ್ರಿ, ಸಂಗೀತಗಾರ್ತಿಯಾಗಿರುವ ಮಾತೆಯವರು ಶರಣರ ಸ್ವರವಚನಗಳನ್ನು ಅತ್ಯಂತ ಸುಮಧುರವಾಗಿ ಹಾಡುತ್ತಾರೆ. ಈಗಾಗಲೇ ಹತ್ತಾರು ಪುಸ್ತಕಗಳನ್ನು ಬರೆದಿರುವ ಇವರ ಹಲವು ಸಿ.ಡಿ.ಗಳು ಕೇಳುಗರ ಮನ ತಣಿಸಿವೆ.

    ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠ: ಕರುಣಾದೇವಿ ಮಾತೆಯವರು ತಮ್ಮ ಸಂಕಲ್ಪದಂತೆ, ಆಂಧ್ರಪ್ರದೇಶ ಸರ್ಕಾರದೊಂದಿಗೆ ನಿರಂತರ ಪತ್ರ ವ್ಯವಹಾರ ಮಾಡಿ ಪಡೆದ ಅರ್ಧ ಎಕರೆ ಜಮೀನಿನಲ್ಲಿ ಶ್ರೀ ಅಕ್ಕಮಹಾದೇವಿ ಚೈತನ್ಯ ಪೀಠವನ್ನು ಸ್ಥಾಪಿಸಿದ್ದಾರೆ. ಈ ಹೋರಾಟದ ಹಾದಿಯಲ್ಲಿ ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಬೆಂಬಲ ಸ್ಮರಣಾರ್ಹ. ಹತ್ತಾರು ವರ್ಷಗಳ ಪರಿಶ್ರಮದ ಫಲವಾಗಿ ನಿರ್ವಣಗೊಂಡ ಚೈತನ್ಯಪೀಠದಲ್ಲಿ ಅಕ್ಕಮಹಾದೇವಿ ಸ್ಮಾರಕ ಅನುಭವ ಮಂಟಪ, ವಚನ ಶಿಲಾಮಂಟಪ, ಸಾಧಕರಿಗಾಗಿ ಶಿವಯೋಗ ಭವನ, ದಾಸೋಹ ಭವನ, ಕ್ಷೇತ್ರಕ್ಕೆ ಬರುವ ಯಾತ್ರಿಕರಿಗಾಗಿ ಯಾತ್ರಿನಿವಾಸ, ಶರಣರ ಜೀವನ ದರ್ಶನ ಮಾಡಿಸುವ ಶೈವ-ವೀರಶೈವ ಮ್ಯೂಸಿಯಂ, ಕನ್ನಡ-ತೆಲುಗು ಸಂಶೋಧನಾ ಕೇಂದ್ರ, ಗ್ರಂಥಾಲಯಗಳ ಯೋಜನೆ ಅಂತಿಮ ಹಂತದಲ್ಲಿದೆ.

    ಸರ್ಕಾರದಿಂದ ಜಯಂತಿ ಆಚರಿಸಲಿ: ಅಕ್ಕಮಹಾದೇವಿ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪ್ರತಿ ವರ್ಷ ಅಕ್ಕಮಹಾದೇವಿಯ ಸ್ಮರಣೋತ್ಸವದಲ್ಲಿ ರಾಷ್ಟ್ರಮಟ್ಟದ ಸಾಧಕರಿಗೆ ನೀಡಲಾಗುತ್ತಿದೆ. ಸರ್ಕಾರ ಈಗಾಗಲೇ ಹಲವು ಮಹಾತ್ಮರ ಜಯಂತಿಯನ್ನು ಆಚರಿಸುತ್ತಿದ್ದು, ಸ್ತ್ರೀಕುಲಕ್ಕೆ ಜ್ಯೋತಿಯಾಗಿರುವ ಅಕ್ಕಮಹಾದೇವಿಯ ಜಯಂತಿಯನ್ನು ಕೂಡ ಸರ್ಕಾರ ಆಚರಿಸಬೇಕು ಎಂಬುದು ಕರುಣಾದೇವಿ ಮಾತಾಜಿ ಒತ್ತಾಯ.

    ವಸ್ತ್ರಸಹಿತ ಅಕ್ಕನ ಮೂರ್ತಿ ಪ್ರತಿಷ್ಠಾಪನೆ: ಅಕ್ಕಮಹಾದೇವಿಯ ನಿರ್ವಸ್ತ್ರ ಸ್ಥಿತಿ ಕೇವಲ ಕೌಶಿಕನ ವಿರುದ್ಧದ ಬಂಡಾಯದ ಪ್ರತೀಕವೇ ಹೊರತು ಜೀವನ ಪೂರ್ತಿ ಅದೇ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ ಎಂಬುದು ಕರುಣಾದೇವಿ ಮಾತೆಯವರ ಅಭಿಪ್ರಾಯ. ಆ ಹಿನ್ನೆಲೆಯಲ್ಲಿಯೇ ಅಕ್ಕಮಹಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕಮಲದ ಮೇಲೆ ವಸ್ತ್ರಸಹಿತಳಾಗಿ ಕುಳಿತ, ಜರ್ಮನ್ ತಂತ್ರಜ್ಞಾನದಲ್ಲಿ ನಿರ್ವಿುಸಿದ ಅಪರೂಪದ ಮೂರ್ತಿ ಇದಾಗಿದೆ.

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts