ಮಾಗಡಿ: ಶ್ರೀಗಂಧ ಮರ ಕದ್ದ ಮೂವರು ಕಳ್ಳರನ್ನು ಮಾಗಡಿ ಪೊಲೀಸರು ಬುಧವಾರ ಬಂಧಿಸಿದ್ದು, 82 ಸಾವಿರ ರೂ. ಮೌಲ್ಯದ 23.5 ಕೇಜಿ ಶ್ರೀಗಂಧ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ರಾಮನಗರ ತಾಲೂಕಿನ ಯರೇಹಳ್ಳಿ- ಇರುಳಿಗರ ದೊಡ್ಡಿ ನಿವಾಸಿಗಳಾದ ಕುಮಾರ (34), ಶಂಕರ್(28), ಮಹೇಶ್(40) ಬಂಧಿತರು.
ತಾಲೂಕಿನ ಅತ್ತಿಂಗೆರೆ ಸೋಮಕ್ಕನ ಮಠದ ಬಳಿಯ 12 ಎಕರೆ ಜಮೀನಿನಲ್ಲಿ ಬೆಳೆದ 10 ವರ್ಷದ ಶ್ರೀಗಂಧಮರಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಜಮೀನು ಮಾಲೀಕ ಪಂಚಲಿಂಗಯ್ಯ ಮಾಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಧಿತ ಮೂವರೂ ಮದ್ಯ ವ್ಯಸನಿಗಳಾಗಿದ್ದು, ಮೋಜಿಗಾಗಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದಿದೆ.