ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲಗುಟ್ಟಹಳ್ಳಿ ಹಾಗೂ ಬೊಮ್ಮೆಪಲ್ಲಿಯ ಶ್ರೀಗಂಧದ ತೋಟಗಗಳಿಗೆ ನುಗ್ಗಿದ ಕಳ್ಳರು ಗಂಧದ ಮರಗಳನ್ನು ಕಡಿದುಕೊಂಡು ಪರಾರಿಯಾಗಿದ್ದಾರೆ.
ನಲ್ಲಗುಟ್ಟಹಳ್ಳಿಯ ನಿಆಶಿ ಖಲೀಲ್ ಅವರು ಸರ್ವೇ ನಂ.47ರ 38 ಗುಂಟೆ ಸ್ವಂತ ಜಮೀನಿನಲ್ಲಿ 200 ಶ್ರೀಗಂಧದ ಮರಗಳು, ಸಹೋದರನ ಸರ್ವೇ ನಂ.47/3ರ 1 ಎಕರೆ ಜಮೀನಲ್ಲಿ 200, ಸೀತಾರಾಂಪುರದ ಸರ್ವೇ ನಂ.23ರಲ್ಲಿ 200ಮರಗಳನ್ನು ನೆಟ್ಟಿದ್ದು, ಮೂರು ಜಮೀನಿಗಳಲ್ಲಿನ ಗಂಧದ ಮರಗಳನ್ನು ಸುಮಾರು 10 ವರ್ಷಗಳಿಂದ ಪೋಷಿಸುತ್ತಿದ್ದಾರೆ. ಬಹುತೇಕ ಮರಗಳು 24 ಅಡಿ ಉದ್ದ ಬೆಳೆದಿದ್ದು, ಮರಗಳ ಸುತ್ತಲೂ ಕಬ್ಬಿಣದ ತಂತಿ ಬೇಲಿ ಹಾಕಿ, ಜಮೀನು ಸುತ್ತಲೂ ಕಣ್ಗಾವಲಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೂ ಜಮೀನು ಒಳಗೆ ನುಗ್ಗಿದ ಕಳ್ಳರು ಮೂರೂ ಜಮೀನುಗಳು ಸೇರಿ 6 ಗಂಧದ ಮರಗಳನ್ನು ಕಡಿದುಕೊಂಡು ಪರಾರಿಯಾಗಿದ್ದಾರೆ ಎಂದು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಬೊಮ್ಮೆಪಲ್ಲಿಯ ಬಿ.ವಿ.ರಮೇಶ್ ಅವರು ಸರ್ವೇ ನಂ.60/19ರ 1 ಎಕರೆ ಮತ್ತು ಸರ್ವೇ ನಂ. 60/20ರ 1 ಎಕರೆ ಜಮೀನು ಸೇರಿ ಒಟ್ಟು ನೂರು ಗಂಧದ ಮರಗಳನ್ನು ನೆಟ್ಟಿದ್ದು, ಎರಡೂ ಜಮೀನುಗಳು ಸೇರಿ 5 ಮರಗಳನ್ನು ಖದೀಮರು ಕಡಿದುಕೊಂಡು ಪರಾರಿಯಾಗಿದ್ದಾರೆ ಎಂದು ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.