

ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ
ಅಕ್ಷಯ ತೃತೀಯಾ ಮತ್ತು ಶ್ರೀಮಠದ 42ನೇ ವಾರ್ಷಿಕೋತ್ಸವದ ಅಂಗವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಂಧ ಲೇಪನಾಲಂಕಾರ ಮಾಡಲಾಯಿತು.
ಮಂತ್ರಾಲಯ ಮಠದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳ ಆದೇಶದಂತೆ ಮಠದ ವ್ಯವಸ್ಥಾಪಕರಾದ ಆರ್. ಕೆ.ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಬುಧವಾರ ಬೆಳಗ್ಗೆ 8ಕ್ಕೆ ಅರ್ಚಕರಾದ ಕೃಷ್ಣಾಚಾರ್ಯ ಹಾಗೂ ರಾಮಚಂದ್ರ ಆಚಾರ್ಯರಿಂದ ಅಭಿಷೇಕ, ನೂತನ ವಸ್ತ್ರ ಸಮರ್ಪಣೆ ನಂತರ ವರ್ಷಕ್ಕೊಮ್ಮೆ ಆಚರಿಸುವ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿಗಳಾದ ಕೃಷ್ಣಗುಂಡಾಚಾರ್ಯರ ನೇತೃತ್ವದಲ್ಲಿ ರಾಘವೇಂದ್ರ ಅಷ್ಟಾಕ್ಷರ ಹೋಮ, ಪಲ್ಲಕ್ಕಿ ಉತ್ಸವ, ಗಜವಾಹನ ಉತ್ಸವ, ರಥೋತ್ಸವ, ಕನಕಾಭಿಷೇಕ, ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆಯೊಂದಿಗೆ ನೆರವೇರಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಬೃಂದಾವನದ ದರ್ಶನ ಮಾಡಿ, ತೀರ್ಥ ಪ್ರಸಾದ ಸ್ವೀಕರಿಸಿದರು.
ರಾಯರ ಬೃಂದಾವನಕ್ಕೆ ಲೇಪಿಸಿದ ಶ್ರೀಗಂಧವನ್ನು ಇಂದು (ಗುರುವಾರ) ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೆ ಭಕ್ತರಿಗೆ ವಿತರಿಸಲಾಗುವುದು ಎಂದು ಶ್ರೀಮಠದ ನಂದಕಿಶೋರಾಚಾರ್ಯರು ತಿಳಿಸಿದ್ದಾರೆ.