

*ತೆರೆ ಮರೆಯಲ್ಲೇ ನಡೆಯುತ್ತಿದೆ ಜೆಸಿಬಿ, ಟ್ರ್ಯಾಕ್ಟರ್ ಗಳ ಗರ್ಜನೆ
* ತಾಲೂಕು ಆಡಳಿತದ ನಿರ್ಲಕ್ಷ್ಯ
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಕಣ್ವ ನದಿಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತೆ ಸದ್ದಿಲ್ಲದೆ ಶುರುವಾಗಿದೆ. ಕಣ್ವನದಿ ಪಾತ್ರದಲ್ಲಿ ಬಿದ್ದಿರುವ ಮರಳು ರಾಶಿ ಹಾಗೂ ಮರಳು ಸಾಗಾಣಿಕೆಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ರಸ್ತೆಗಳೇ ಅಕ್ರಮ ದಂಧೆಗೆ ಸಾಕ್ಷಿಯಾಗಿವೆ.
ಹೌದು.., ಒಂದು ಕಾಲದಲ್ಲಿ ಮರಳು ಗಣಿಗಾರಿಕೆ ಎಂಬ ಮಾಯೆ ಇಡೀ ಕಣ್ವ ನದಿ ಪಾತ್ರವನ್ನೇ ಬುಡಮೇಲು ಮಾಡಿತ್ತು. ಆದರೆ, ಸರ್ಕಾರ ಮರಳು ಗಣಿಗಾರಿಕೆಯನ್ನು ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಅಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ಇತ್ತೀಚೆಗೆ ಸದ್ದಿಲ್ಲದೇ ಮತ್ತೆ ಆರಂಭಗೊಂಡಿದೆ. ಅದರಲ್ಲೂ ಅಕ್ಕೂರು ಠಾಣಾ ವ್ಯಾಪ್ತಿಯಲ್ಲಿ ದಂಧೆ ಜೋರಾಗುತ್ತಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಅಕ್ರಮ ಮರಳು ಗಣಿಗಾರಿಕೆ ನಿಷೇಧಿಸಿ 2000ರಲ್ಲೇ ಸರ್ಕಾರ ಆದೇಶ ಹೊರಡಿಸಿತ್ತು. ಆದರೂ, ಅಕ್ರಮ ಮರಳು ಗಣಿಗಾರಿಕೆ ನಿಂತಿರಲಿಲ್ಲ. ಮರಳು ಗಣಿಗಾರಿಕೆಯ ತೀವ್ರತೆ ಹಾಗೂ ಅಂತರ್ಜಲದ ಮೇಲೆ ಬೀರಿದ ಗಂಭೀರ ಪರಿಣಾಮ ಗಮನಿಸಿ 2007 ರಿಂದಲೇ ಮತ್ತೊಮ್ಮೆ ಕಟ್ಟುನಿಟ್ಟಾಗಿ ಮರಳು ಗಣಿಗಾರಿಕೆ ನಿಷೇಧಿಸಲಾಯಿತು. ಅಂದಿನಿAದ ಸ್ತಬ್ಧವಾಗಿದ್ದ ದಂಧೆ ಕೆಲದಿನಗಳಿಂದ ತಾಲೂಕಿನ ಕಣ್ವ ನದಿಪಾತ್ರದಲ್ಲಿ ಮತ್ತೆ ಪುನರಾರಂಭಗೊAಡಿದೆ. ರಾತ್ರಿಯಾಗುತ್ತಲೇ ಜೆಸಿಬಿಗಳ ಮೂಲಕ ನದಿಯಿಂದ ಮರಳು ಎತ್ತಿ ದಡದಲ್ಲಿ ರಾಶಿ ಮಾಡಲಾಗುತ್ತಿದೆ. ತದನಂತರ, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್ ಸೇರಿ ಇನ್ನಿತರ ಸಣ್ಣಪುಟ್ಟ ವಾಹನಗಳ ಮೂಲಕ ಮರಳು ಸಾಗಿಸಲಾಗುತ್ತಿದೆ. ರಾತ್ರಿ ಸಮಯದಲ್ಲಿ ಕಣ್ವ ನದಿಯ ಒಡಲನ್ನು ದೋಚುವ ಕೃತ್ಯ ಅಡೆತಡೆ ಇಲ್ಲದೆ ಸಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾ ಮತ್ತು ತಾಲೂಕು ಆಡಳಿತ ಮೌನಕ್ಕೆ ಶರಣಾಗಿರುವುದು ವಿಪರ್ಯಾಸವೇ ಸರಿ.
ಹಲವು ವರ್ಷಗಳಿಂದ ಕಣ್ವನದಿ ಮರಳು ಗಣಿಗಾರಿಕೆ ನಡೆಸುವವರಿಗೆ ಹಾಟ್ ಸ್ಪಾಟ್ ಎನಿಸಿರುವುದು ಸುಳ್ಳಲ್ಲ. ಆದರೆ, ಮರಳು ಗಣಿಗಾರಿಕೆ ನಿಷೇಧದ ಪರಿಣಾಮ ಹಾಗೂ ನದಿಗೆ ಅಡ್ಡಲಾಗಿ ಹಲವು ಕಡೆ ಚೆಕ್ ಡ್ಯಾಂ ನಿರ್ಮಾಣ ಹಾಗೂ ಏತನೀರಾವರಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ನದಿಯಲ್ಲಿ ಯಾವಾಗಲೂ ನೀರು ನಿಂತ ಪರಿಣಾಮ ದಂಧೆಗೆ ಕಡಿವಾಣ ಬಿದ್ದಿತ್ತು. ಆದರೆ, ಪ್ರಸುತ್ತ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಕಣ್ವ ಒಡಲು ಬಗೆಯಲಾಗುತ್ತಿದೆ. ತಾಲೂಕಿನ ಕಣ್ವ ನದಿ ಪಾತ್ರದಲ್ಲಿ 2003 ರಿಂದ 2007ರ ವರೆಗೆ ಅವ್ಯಾಹತವಾಗಿದ್ದ ಮರಳು ಗಣಿಗಾರಿಕೆಯಿಂದ ಕಣ್ವ ನದಿ ಪಾತ್ರವೇ ಬದಲಾಗಿತ್ತು. ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಸರ್ಕಾರದ ಆದೇಶದ ಬಳಿಕ ಎಲ್ಲವೂ ಸುಧಾರಿಸಿತ್ತಾದರೂ ಈಗ ದಂಧೆ ಶುರುವಾಗಿದೆ.
ಈ ಹಿಂದಿನಿAದಲೂ ಅಕ್ಕೂರು ಠಾಣಾ ವ್ಯಾಪ್ತಿಯಲ್ಲಿ ಮರಳು ದಂಧೆ ನಡೆಯುತ್ತಿದೆ. ರಾತ್ರಿ ಸಮಯದಲ್ಲಿ ಆರಂಭವಾಗುವ ಈ ದಂಧೆ ಹಗಲಿನಲ್ಲಿ ಸ್ಥಗಿತಗೊಳ್ಳುತ್ತಿದೆ. ತಾಲೂಕಿನಲ್ಲಿ ಸಣ್ಣ ಪ್ರಮಾಣದಲ್ಲಿ ಮರಳು ಗಣಿಗಾರಿಕೆ ಆರಂಭವಾಗಿರುವುದರ ಹಿಂದೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣ ಎಂಬ ಮಾತುಗಳು ಕೇಳಿಬಂದಿವೆ. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಇನ್ನಾದರೂ ತಾಲೂಕಿನಲ್ಲಿ ಸಣ್ಣದಾಗಿ ಆರಂಭಗೊಂಡಿರುವ ಮರಳು ಮಾಫಿಯಾವನ್ನು ಆರಂಭದಲ್ಲೇ ಚಿವುಟಬೇಕಿದೆ.
ಮರಳು ಗಣಿಗಾರಿಕೆಯನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕಣ್ವ ನದಿ ಪಾತ್ರ ಸೇರಿ ತಾಲೂಕಿನಲ್ಲಿ ಮರಳು ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಆಸ್ಪದವಿಲ್ಲ. ಕದ್ದುಮುಚ್ಚಿ ಗಣಿಗಾರಿಕೆ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆ ಸೇರಿ ಸಂಬAಧಿಸಿದವರಿಗೆ ಸೂಚಿಸುತ್ತೇನೆ. ಅಂತರ್ಜಲ ಅಭಿವೃದ್ಧಿ ಹಾಗೂ ಕಾಪಾಡಿಕೊಳ್ಳುವುದಕ್ಕೆ ನಮ್ಮ ಆದ್ಯತೆ.| ಸಿ.ಪಿ.ಯೋಗೇಶ್ವರ್, ಶಾಸಕರು ಚನ್ನಪಟ್ಟಣ.==ಅಂತರ್ಜಲ ಮಟ್ಟ ಕುಸಿಯಲು ಪ್ರಮುಖ ಕಾರಣವೇ ಮರಳು ಗಣಿಗಾರಿಕೆ ಎಂಬುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಎಂತಹ ಕಷ್ಟದ ಪರಿಸ್ಥಿತಿ ಅನುಭವಿಸಿದ್ದೇವೆ ಎಂಬುದನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಮತ್ತೆ ಅಂತಹ ದಿನಗಳು ಬಾರದಂತೆ ನೋಡಿಕೊಳ್ಳ ಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಜಿಲ್ಲಾಢಳಿತ ಮುಲಾಜಿಲ್ಲದೆ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು.| ಚಿಕ್ಕವಿರೇಗೌಡ,ಚನ್ನಪಟ್ಟಣ