ಎತ್ತಿನಬಂಡಿಯಲ್ಲಿ ಮರಳು ಸಾಗಾಟ!

17-RNR-01
Published on

ರಾಣೆಬೆನ್ನೂರ: ಜಾನುವಾರುಗಳನ್ನು ಕೃಷಿ ಕಾರ್ಯಗಳಿಗೆ ಬಿಟ್ಟು ಅನ್ಯ ಕಾರ್ಯಗಳಿಗೆ ಬಳಸಬಾರದು ಎಂಬ ನಿಯಮವಿದೆ. ಆದರೆ, ರಾಣೆಬೆನ್ನೂರಿನಲ್ಲಿ ಅಕ್ರಮ ಮರಳು ದಂಧೆಕೋರರು ಮರಳು ಸಾಗಾಟಕ್ಕೆ ಎತ್ತುಗಳನ್ನು ಬಳಸುತ್ತಿದ್ದಾರೆ.

ಮರಳು ಸಾಗಾಟದ ಸಮಯದಲ್ಲಿ ಎತ್ತುಗಳು ನದಿಪಾತ್ರದಲ್ಲಿ ಕಾಲು ಸಿಲುಕಿಕೊಂಡು, ಭಾರ ಹೊರಲಾರದೆ ನರಕ ಯಾತನೆ ಅನುಭವಿಸುತ್ತವೆ. ಆದರೆ, ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕಿರುವ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯ ಮೂಡಿಸುತ್ತದೆ.

ತಾಲೂಕಿನ ಚೌಡಯ್ಯದಾನಪುರ, ಚಂದಾಪುರ, ಹರನಗಿರಿ ಸೇರಿ ವಿವಿಧ ಗ್ರಾಮಗಳಲ್ಲಿ ಮರಳು ದಂಧೆಕೋರರು ನಿತ್ಯವೂ ಬೆಳಗ್ಗೆ 4 ಗಂಟೆಯಿಂದ 8ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 7ರವರೆಗೆ ಎತ್ತಿನ ಬಂಡಿಗಳಲ್ಲಿ ತುಂಗಭದ್ರಾ ನದಿಪಾತ್ರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಾರೆ. ಕೆಲವರು ತಮ್ಮ ಮನೆ ಹಿಂಭಾಗದಲ್ಲಿ ಸಂಗ್ರಹಿಸಿಕೊಂಡು ಲಾರಿ ಮೂಲಕ ಬೇರೆ ಬೇರೆ ಊರುಗಳಿಗೆ ಮಾರಾಟ ಮಾಡುತ್ತಾರೆ. ಇನ್ನು ಕೆಲವರು ಗ್ರಾಮದ ಅಕ್ಕಪಕ್ಕದಲ್ಲಿ ನಡೆಯುವ ಕಟ್ಟಡ ಕಾಮಗಾರಿಗಳ ಸ್ಥಳಕ್ಕೆ ನೇರವಾಗಿ ಪೂರೈಕೆ ಮಾಡುತ್ತಿದ್ದಾರೆ.

ಒಂದು ಎತ್ತಿನ ಬಂಡಿಗೆ 1600 ರೂ. ಫಿಕ್ಸ್ ಮಾಡಿದ್ದು, ನಿತ್ಯವೂ ತಲಾ ಒಬ್ಬರು ಐದಾರು ಎತ್ತಿನ ಬಂಡಿಗಳಷ್ಟು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ.

ಈ ಭಾಗದ ಮರಳು ದಂಧೆಕೋರರು ಬೆಳಗಾವಿ, ಬಾಗಲಕೋಟೆ, ಮೈಸೂರು, ಮಂಡ್ಯ ಸೇರಿ ಬೇರೆ ಬೇರೆ ಪಟ್ಟಣಗಳಿಂದ 1 ಲಕ್ಷದಿಂದ 2 ಲಕ್ಷ ರೂ.ವರೆಗೆ ಬೆಲೆಬಾಳುವ ಎತ್ತುಗಳನ್ನು ಖರೀದಿಸಿ ತಂದಿದ್ದಾರೆ. ನದಿಯಲ್ಲಿ ಮರಳು ಲಭ್ಯವಿರುವವರೆಗೂ ಎತ್ತುಗಳನ್ನು ದುಡಿಸಿಕೊಂಡು ನಂತರ ಮಾರಾಟ ಮಾಡುತ್ತಾರೆ.

ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ರೈತನ ಬದುಕು ಹನಸು ಮಾಡಬೇಕಾದ ಎತ್ತುಗಳನ್ನು ಯಾವ ಕಾರಣಕ್ಕೂ ಮರಳು ಸಾಗಾಟಕ್ಕೆ ಬಳಸಿಕೊಳ್ಳಬಾರದು ಎಂದು ಈ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ ನಾಯಕ ಆದೇಶ ಹೊರಡಿಸಿದ್ದರು. ಜಿಲ್ಲಾಡಳಿತ ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.

ಎತ್ತಿನ ಬಂಡಿ ಏಕೆ? : ಲಾರಿ, ಕ್ಯಾಂಟರ್, ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗಾಟ ಮಾಡುವಾಗ ಅಧಿಕಾರಿಗಳ ಕೈಗೆ ಸಿಕ್ಕರೆ ಪೊಲೀಸ್ ಠಾಣೆ, ಕೋರ್ಟ್ ಎಂದು ಅಲೆಯಬೇಕಾಗುತ್ತದೆ. ಆದರೆ, ಎತ್ತಿನ ಬಂಡಿ ಮೂಲಕ ಮರಳು ತೆಗೆದುಕೊಂಡು ಹೋಗುವಾಗ ಯಾರಾದರೂ ಕೇಳಿದರೆ, ‘ನಮ್ಮ ಮನೆ ಶೌಚಗೃಹಕ್ಕೆ, ಗೋಡೆ ಸ್ವಲ್ಪ ಬಿದ್ದಿದೆ, ಕಾಂಪೌಂಡ್ ಕೆಲಸ ಸ್ವಲ್ಪ ನಿಂತಿದೆ’ ಎಂಬ ನಾನಾ ಕಾರಣ ಹೇಳಿ ತಪ್ಪಿಸಿಕೊಳ್ಳಬಹುದು. ಅಲ್ಲದೆ, ಅಧಿಕಾರಿಗಳು ಎತ್ತಿನ ಬಂಡಿಯನ್ನು ಸೀಸ್ ಮಾಡುವುದಿಲ್ಲ. ಇದನ್ನೇ ಅಕ್ರಮ ದಂಧೆಕೋರರು ತಮ್ಮ ಲಾಭಕ್ಕೆ ಉಪಯೋಗಿಸಿಕೊಂಡಿದ್ದಾರೆ.

ಎತ್ತುಗಳಿರುವುದು ಜಮೀನುಗಳನ್ನು ಉಳುಮೆ ಮಾಡಲು. ಆದರೆ, ತಾಲೂಕಿನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲು ಬಸವಣ್ಣನನ್ನು ದುಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಇಂಥವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. | ಕೃಷ್ಣಮೂರ್ತಿ ಎಲ್., ಸ್ಥಳೀಯ ರೈತ ಎತ್ತಿನ ಬಂಡಿಗಳಲ್ಲಿ ಮರಳು ಸಾಗಿಸಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಚೌಡಯ್ಯದಾನಪುರ ಬಳಿ ಎತ್ತಿನ ಬಂಡಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಕುರಿತು ಕೂಡಲೆ ಇಲಾಖೆಯ ತಂಡದವರಿಗೆ ಸೂಚಿಸಿ, ಪರಿಶೀಲಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. | ಬಸನಗೌಡ ಕೋಟೂರು, ತಹಸೀಲ್ದಾರ್ ರಾಣೆಬೆನ್ನೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net