ಸನಾತನ ಪರಂಪರೆ ಗತವೈಭವ ಪುನರುತ್ಥಾನ: ಎಡನೀರು ಶ್ರೀ ಶುಭನುಡಿ

Bdk_Sanatana
Published on

ಬದಿಯಡ್ಕ: ಕಾಲಕಾಲಕ್ಕೆ ಎದುರಾದ ದುರಿತಗಳಿಂದಾಗಿ ನಾಶಹೊಂದಿದ ಕ್ಷೇತ್ರಗಳು, ದೇವತಾ ಸಾನ್ನಿಧ್ಯ ಶಕ್ತಿಗಳ ಪ್ರೇರಣೆಯಿಂದ ಪುನರುದ್ಧಾರಗೊಳ್ಳುವುದರೊಂದಿಗೆ ಸನಾತನ ಧರ್ಮ ವಿಶ್ವಾಸಿಗಳ ಬದ್ಧತೆ, ಧಾರ್ಮಿಕ ನಂಬಿಕೆ ಬಲಗೊಳ್ಳುತ್ತದೆ. ಹಿಂದು ಸನಾತನ ಪರಂಪರೆ ಗತವೈಭವವನ್ನು ಮತ್ತೆ ಕಾಣುವಂತಾಗಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು ನುಡಿದರು.

ಕೊಲ್ಲಂಗಾನ ಅರ್ತಲೆ ಶ್ರೀ ರಕ್ತೇಶ್ವರಿ ನಾಗ-ಗುಳಿಗ ಸನ್ನಿಧಿಯಲ್ಲಿ ಜರುಗಿದ ಪುನಃಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ ದೇವತಾ ಕಾರ್ಯಗಳು ನಿರಂತರ ಮುಂದುವರಿಯಬೇಕು ಎಂದಾದರೆ ಭಗವದ್ಭಕ್ತರು ನಿಷ್ಠೆಯಿಂದ ಧಾರ್ಮಿಕ ಕ್ಷೇತ್ರಗಳತ್ತ ಸಾಗಬೇಕು ಎಂದರು.

ಉದ್ಯಮಿ ಮಧುಸೂದನ ಆಯರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸುಬ್ಬಣ್ಣ ನಾಯ್ಕ ಅರ್ತಲೆ ಅಧ್ಯಕ್ಷತೆ ವಹಿಸಿದ್ದರು. ಮಧೂರು ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಪಾಡಿ ಅರಮನೆಯ ಹರಿಪ್ರಸಾದ ಜೆ.ಎಸ್, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಭಟ್ ಪಾಡಿ ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೊ.ಎ.ಶ್ರೀನಾಥ್ ಸ್ವಾಗತಿಸಿದರು. ಮಹೇಶ್ ವಳಕ್ಕುಂಜ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಅರ್ತಲೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net