

ಮಂಗಳೂರು: ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ಸ್ ಯುನಿಸೆಕ್ಸ್ ಸೆಲೂನ್‌ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗುರುವಾರ ಮಧ್ಯಾಹ್ನ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಮುಖಂಡ ಪ್ರಸಾದ್ ಅತ್ತಾವರ ಸಹಿತ 14 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕಾರ್ಯಕರ್ತರು ಪೀಠೋಪಕರಣ ಸಹಿತ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಸೆಲೂನ್‌ನ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಲ್ಲಿದ್ದ ಯುವತಿಯರಿಗೆ ಬೆದರಿಕೆ ಹಾಕಿದ್ದಾರೆ. ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್‌ಗಳನ್ನು ಮುಚ್ಚುವಂತೆ ಶ್ರೀರಾಮ ಸೇನಾ ಕಾರ್ಯಕರ್ತರು ಆಗ್ರಹಿಸಿದ್ದಾರೆ. ದಾಳಿ ನಡೆಸಿ ಸೊತ್ತು ಹಾನಿ ಎಸಗಿದ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಸೆಲೂನ್ ಮಾಲೀಕರು ಬರ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮಧ್ಯಾಹ್ನ 11.51ರ ಸಮಯ 9-10 ಮಂದಿ ದಾಳಿ ನಡೆಸಿದ್ದರು. ಘಟನಾ ಸ್ಥಳಕ್ಕೆ ಡಿಸಿಪಿ ಸಿದ್ಧಾರ್ಥ ಗೋಯಲ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸೆಲೂನ್‌ನ ಮಹಿಳಾ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗಿದೆ. ಗ್ರಾಹಕರು ಇಲ್ಲದ ವೇಳೆ ದಾಂಧಲೆ ನಡೆಸಿದ ಬಗ್ಗೆ ಡಿಸಿಪಿಗೆ ಮಹಿಳಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವೇಶ್ಯಾವಾಟಿಕೆ ಆರೋಪ
ಮಸಾಜ್ ಸೆಂಟರ್ ದಾಳಿಗೆ ಸಂಬಂಧಿಸಿ ಶ್ರೀರಾಮ ಸೇನಾ ಮುಖಂಡ ಪ್ರಸಾದ್ ಅತ್ತಾವರ್‌ನನ್ನು ಕುಡುಪು ಬಳಿಯ ಆತನ ಮನೆಯಿಂದ ಬಂಧಿಸಿದ್ದಾರೆ. ಆತ ತನ್ನ ನಿವಾಸದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ, ನಾವೇ ದಾಳಿ ನಡೆಸಿದ್ದೇವೆ. ಅಲ್ಲಿ 15-16 ವರ್ಷದ ಕಾಲೇಜು ಹುಡುಗಿಯರನ್ನು ಕರೆ ತಂದು ವೇಶ್ಯಾವಾಟಿಕೆ ಮಾಡುತ್ತಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾನೆ.
ಬೆದರಿಕೆ ಹಾಕಿದ ಆರೋಪಿಗಳು
ಸೆಲೂನ್‌ನಲ್ಲಿದ್ದ ಯುವತಿಯರಿಗೆ, ನೀವು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದೀರಾ ಎಂದು ದಾಳಿಕೋರರು ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದಾರೆ. ಯುವತಿಯರು ಕೈ ಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ. ಕಾರ್ಯಕರ್ತರೇ ಜತೆಗೆ ಕ್ಯಾಮರಾಮನ್‌ನನ್ನು ಕರೆದೊಯ್ದು ದಾಳಿ ನಡೆಸಿದ್ದಾರೆ. ವಿಡಿಯೋವನ್ನು ದಾಳಿಕೋರರೇ ಬಿಡುಗಡೆ ಮಾಡಿದ್ದಾರೆ. ಮೂಲಗಳ ಪ್ರಕಾರ, ಈ ಮಸಾಜ್ ಪಾರ್ಲರ್ ವರ್ಷದ ಹಿಂದೆ ಆರಂಭವಾಗಿದ್ದು, ಬಿಜೈ ಆನೆಗುಂಡಿ ಸುಧೀರ್ ಎಂಬುವರಿಗೆ ಸೇರಿದ್ದಾಗಿದೆ.
14 ಮಂದಿ ಬಂಧನ
ಪ್ರಕರಣಕ್ಕೆ ಸಂಬಂಧಿಸಿ ಫರಂಗಿಪೇಟೆಯ ಹರ್ಷರಾಜ್ ಯಾನೆ ಹರ್ಷಿತ್, ಮೂಡುಶೆಡ್ಡೆಯ ಮೋಹನದಾಸ್ ಯಾನೆ ರವಿ, ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ಉಳಾಯಿಬೆಟ್ಟು ಪೆರ್ಮಂಕಿಯ ರವೀಶ್, ಬೆಂಜನಪದವು ಶಿವಾಜಿನಗರದ ಸುಕೇತ್, ವಾಮಂಜೂರುನ ಅಂಕಿತ್, ಮೂಡುಶೆಡ್ಡೆಯ ಖಾಲಿ ಮುತ್ತು, ತಾರಿಗುಡ್ಡೆಯ ಅಭಿಲಾಷ್, ಮೂಡುಶೆಡ್ಡೆ ಶಿವಾಜಿ ನಗರದ ದೀಪಕ್, ಸರಿಪಲ್ಲದ ವ್ನಿೇಶ್, ಮಂಕಿಸ್ಟಾೃಂಡ್‌ನ ಕ್ಯಾಮರಾಮನ್ ಶರಣ್‌ರಾಜ್, ಮೂಡುಶೆಡ್ಡೆ ಶಿವಾಜಿನಗರದ ಪ್ರದೀಪ್ ಪೂಜಾರಿ, ಪ್ರಸಾದ್ ಅತ್ತಾವರ ಬಂಧಿತರು. ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.