

ತುಮಕೂರು: ರಂಗಕಲೆ ಈ ಮಣ್ಣಿನ ಕಲೆ. ರಂಗಭೂಮಿಯಲ್ಲಿ ಸದಾ ಜೀವಂತಿಕೆ ಇದ್ದೇ ಇರುತ್ತದೆ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಸಂಜೆ ಸಮ್ಮುಖ ರಂಗಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸತ ಕಲಾವಿದ ಎ.ಎಸ್.ಎ.ಖಾನ್ರನ್ನು ಅಭಿನಂದಿಸಿ ಮಾತನಾಡಿದ ಅವರು, ಒಂದು ಕಲೆ ಇನ್ನೊಂದು ಕಲೆಯನ್ನು ನಾಶ ಮಾಡುವುದಿಲ್ಲ. ಚಲನಚಿತ್ರ, ಟಿವಿ ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿಗೆ ಧಕ್ಕೆಯಾಗುವುದಿಲ್ಲ ಎಂದರು.
ತುಮಕೂರಿನ ಮಣ್ಣಿನಲ್ಲಿ ರಂಗಭೂಮಿಯ ಕಲೆ ಜೀವಂತವಾಗಿದೆ. ಮಹಾನ್ ಕಲಾವಿದರು ಈ ಮಣ್ಣಿನಲ್ಲಿ ಹುಟ್ಟಿ ಕಲೆಯನ್ನು ಬೆಳಗಿದರು. ವರನಟ ಡಾ.ರಾಜ್ಕುಮಾರ್ ತುಮಕೂರಿನ ಮಣ್ಣಿನ ಕಲೆಯ ಗುಣವನ್ನು ಹಾಡಿಹೊಗಳಿದ್ದರು. ಇಂತಹ ತುಮಕೂರಿನಲ್ಲಿ ರಂಗಕಲೆಯ ಮರುಉತ್ಥಾನ ಆಗಬೇಕು ಎಂದು ಆಶಿಸಿದರು.
ಎ.ಎಸ್.ಎ.ಖಾನ್ ತಮ್ಮ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಲವು ಪಾತ್ರಗಳಲ್ಲಿ ಅಭಿನಯಿಸಿ ಜೀವ ತುಂಬಿದ್ದಾರೆ. ಎಲೆಮರೆಕಾಯಿಯಂತೆ ಕೆಲಸ ಮಾಡಿಕೊಂಡಿದ್ದ ಖಾನ್ರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿ ನೀಡಿರುವುದು ಸಂತಸದ ವಿಚಾರ. ಕನ್ನಡ ಭಾಷೆ, ಸಂಸತಿ, ಸಾಹಿತ್ಯ ಪ್ರೀತಿ ಹೊಂದಿರುವ ಖಾನ್ ಸುಸಂಸತ, ಸಜ್ಜನ ಕಲಾವಿದ. ಯಾವುದೇ ಪ್ರಶಸ್ತಿ ನೀಡುವುದು ಆ ಕಲಾವಿದನ ಜವಾಬ್ದಾರಿ ಹೆಚ್ಚಿಸಲು, ಮತ್ತಷ್ಟು ಕೆಲಸ ಮಾಡಲು ಎಂದರು.
ಎಚ್ಎಂಟಿ ಕಾರ್ಖಾನೆ ಜಿಲ್ಲೆಯಲ್ಲಿ ಕೇವಲ ಆರ್ಥಿಕ ಚಟುವಟಿಕೆ ಹೆಚ್ಚು ಮಾಡಲಿಲ್ಲ. ಕಲಾಶ್ರೀಮಂತಿಕೆಯನ್ನೂ ತಂದುಕೊಟ್ಟಿತು. ಎಚ್ಎಂಟಿಯ ಕಲಾವಿದರು ದೇಶಾದ್ಯಂತ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಹೊತ್ತು ತರುತ್ತಿದ್ದರು. ತುಮಕೂರಿಗೆ ಕೀರ್ತಿ ತಂದಿದ್ದರು. ಆ ವೈಭವದ ದಿನ ಮರುಕಳಿಸಬೇಕು ಎಂದು ಹಿರಿಯ ರಂಗಭೂಮಿ ಕಲಾವಿದ, ಹರಿಕಥ ವಿದ್ವಾನ್ ಡಾ.ಲಕ್ಷ್ಮಣದಾಸ್ ಹೇಳಿದರು.
ಎಚ್ಎಂಟಿ ಸಾಂಸ್ಕತಿಕವಾಗಿ ದೊಡ್ಡ ಕೊಡುಗೆ ನೀಡಿದೆ. ಅಂದಿನ ರಂಗ ಚಟುವಟಿಕೆಗಳು ನಾಡಿನಾದ್ಯಂತ ಹೆಸರಾಗಿದ್ದವು. ಆ ರಂಗಶ್ರೀಮಂತಿಕೆಯ ದಾಖಲಾಗಲಿಲ್ಲ. ನಮ್ಮ ಸುತ್ತಮುತ್ತ ಕೆಟ್ಟ ಕೆಲಸಗಳೇ ದಾಖಲಾಗುತ್ತಿರುತ್ತವೆ. ಒಳ್ಳೆಯ ಕೆಲಸಗಳನ್ನು ದಾಖಲು ಮಾಡದಿದ್ದರೆ ಕೆಟ್ಟ ಕೆಲಸಗಳು ವಿಜೃಂಭಿಸಿಬಿಡುತ್ತವೆ ಎಂದು ಸಮ್ಮುಖ ರಂಗಸಂಪನ್ಮೂಲ ಕೇಂದ್ರದ ಅಧ್ಯಕ್ಷ ಕೆ.ಎಸ್.ಸತೀಶ್ ತಿಳಿಸಿದರು.
ಎಚ್ಎಂಟಿ ನಿವೃತ್ತ ಅಧಿಕಾರಿ ಡಾ.ಜಿ.ವೆಂಕಟೇಶಲು, ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಸಮ್ಮುಖ ರಂಗಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷ ಕರಣಂ ರಮೇಶ್, ಕಾರ್ಯದರ್ಶಿ ಟಿ.ಸಿ.ಜಯಪ್ರಕಾಶ್, ನಿರ್ದೇಶಕರಾದ ಸುಷ್ಮಾ, ರವೀಂದ್ರ ಕೆಂಚಮಾರಯ್ಯ, ಮಂಜುನಾಥ್, ಸಂಜನ್ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಾಹಿತ್ಯ, ಸಂಗೀತ, ಕಲೆಯಲ್ಲಿ ತುಮಕೂರು ಜಿಲ್ಲೆ ನಾಡಿಗೆ ದೊಡ್ಡ ಕೊಡುಗೆ ನೀಡಿದೆ. ನಮ್ಮಲ್ಲಿ ಕಲೆ ಶ್ರೀಮಂತವಾಗಿದೆ. ಆದರೆ, ಕಲಾವಿದರು ಬಡವಾಗಿದ್ದಾರೆ. ಕಲೆಗೆ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಕಲಾವಿದರಿಗೆ ಜೀವನ ಭದ್ರತೆ ಇಲ್ಲ. ಸರ್ಕಾರಗಳು ಇಂತಹ ಕಲಾವಿದರ ನೆರವಿಗೆ ಬರಬೇಕು. ಆ ಮೂಲಕ ಕಲೆಯ ಬೆಳವಣಿಗೆಗೆ ಸಹಕರಿಸಬೇಕು. ತುಮಕೂರಿನವರೇ ಆದ ಪಿ.ಶೇಷಾದ್ರಿ ಅವರ ಚಲನಚಿತ್ರಗಳ ಉತ್ಸವ ಹಾಗೂ ವಿಚಾರಗೋಷ್ಠಿ ಏರ್ಪಡಿಸುವ ಚಿಂತನೆ ಇದೆ. ಕೆ.ಎಸ್.ಸಿದ್ದಲಿಂಗಪ್ಪ ಜಿಲ್ಲಾಧ್ಯಕ್ಷ, ಕಸಾಪ