

ಕೋಲಾರ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದ್ದು, ಘಟನೆಯ ಕುರಿತ ಮತ್ತಷ್ಟು ಮಾಹಿತಿ ಬಹಿರಂಗಗೊಂಡಿದೆ.
ಕೋಲಾರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ನ. 7ರಂದು ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಅಸ್ವಸ್ಥಗೊಂಡ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮುನಿಯಪ್ಪ (70), ಅವರ ಪತ್ನಿ ನಾರಾಯಣಮ್ಮ (45), ಬಾಬು (45), ಪುಷ್ಪ (35) ಹಾಗೂ ಗಂಗೋತ್ರಿ (18) ಆತ್ಮಹತ್ಯೆಗೆ ಯತ್ನಿಸಿದ್ದವರು. ಇವರಲ್ಲಿ ಪುಷ್ಪಾ ಹೊರತುಪಡಿಸಿ ಉಳಿದ ನಾಲ್ವರೂ ಮಾರನೇ ದಿನ ಸಾವಿಗೀಡಾಗಿದ್ದರು. ಆ ನಂತರ ಪುಷ್ಪ ಕೂಡ ಮೃತಪಟ್ಟಿದ್ದರು.
ಮಗುವೊಂದರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಹೆದರಿ ಈ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗಿದ್ದು, ಪ್ರಕರಣ ಸಂಬಂಧ ಡೆತ್ನೋಟ್ ಆಧರಿಸಿ ತನಿಖೆ ಚುರುಕುಗೊಂಡಿದೆ.
ಈಗ ಘಟನೆಗೆ ಸಂಬಂಧಿಸಿದಂತೆ ಅಪಹರಣಕ್ಕೀಡಾದ ಮಗುವಿನ ತಂದೆಯ ಮೇಲೆಯೇ ಅನುಮಾನ ಮೂಡಿದೆ. ಮಗುವಿನ ತಂದೆ ಸತ್ಯ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಮಗುವಿನ ಮಾರಾಟ ಮತ್ತು ಅಪಹರಣದಲ್ಲಿ ತಂದೆಯ ಪಾತ್ರವಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದೆ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ಗೀತಾ ಎಂಬಾಕೆಯ ಶೋಧಕ್ಕೂ ಬಲೆ ಬೀಸಲಾಗಿದೆ.