

ಬೆಂಗಳೂರು: ದೇಶದಲ್ಲಿನ ಅನೇಕ ಘಟನೆಗಳಿಂದಾಗಿ ಇಂದು ಸೌಹರ್ದ ಸಮಾಜ ನಿರ್ಮಾಣ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಸೌಹಾರ್ದ ಕರ್ನಾಟಕ ನಗರದ ಎನ್‌ಜಿಒ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸೌಹಾರ್ದ ಪರಂಪರೆ ಮತ್ತು ಸಮಕಾಲೀನತೆ’ ರಾಜ್ಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾನ ಸಮಾಜ ನಿರ್ಮಾಣದ ಹಾದಿಯಲ್ಲಿ ಸಾಗಿದಾಗ ಸೌಹಾರ್ದತೆ ಸಾಧ್ಯ. ಸಮಾನತೆಯತ್ತ ಸಾಗಬೇಕಾದ ಈ ದೇಶದ ದಿಕ್ಕನ್ನು ತಪ್ಪಿಸುವುದಾಕ್ಕಿಗಿಯೇ ಅಸಹಿಷ್ಣುತೆ ಉಂಟುಮಾಡಿ ದ್ವೇಷವಾದ ಮುನ್ನೆಲೆಗೆ ತರಲಾಗಿದೆ. ಇಂತಹ ಕಾಲಘಟ್ಟದಲ್ಲಿ ಸೌಹಾರ್ದತೆಯನ್ನು ಸ್ಥಾಪಿಸುವ ಮೂಲಕ ಸಮಾನತೆಯ ಹಾದಿಯನ್ನು ಸುಲಭ ಮಾಡಿಕೊಳ್ಳಬೇಕು. ಸೌಹಾರ್ದ ಭಾರತ ಇಲ್ಲಿದೆ ಎಂಬ ಸತ್ಯವನ್ನು ಜನರಿಗೆ ತಿಳಿಸಬೇಕಿದೆ ಎಂದರು.
ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ಅನೇಕ ಧರ್ಮಗಳು, ಜಾತಿಗಳು, ಉಪಜಾತಿಗಳನ್ನು ಹೊಂದಿರುವ ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಕೇವಲ ಹಿಂದುಗಳಷ್ಟೇ ಅಲ್ಲ, ಎಲ್ಲ ಧರ್ಮದವರ ರಕ್ತವೂ ಹರಿದಿದೆ. ಆದರೆ ಎಲ್ಲರೂ ಒಪ್ಪಿ ಅನುಷ್ಠಾನಕ್ಕೆ ತಂದಿದ್ದ ಸಂವಿಧಾನಕ್ಕೆ ಹಾಗೂ ಅದರ ಆಶಯಕ್ಕೆ ಇಂದು ಧಕ್ಕೆ ಬಂದಿದೆ. ಈ ಧಕ್ಕೆಯು ಭಯೋತ್ಪಾದನೆ, ಕೋಮುವಾದ, ಮೂಲಭೂತವಾದ, ಭ್ರಷ್ಟಾಚಾರ, ಅಪರಾಧೀಕರಣ, ಅತಿಯಾದ ವ್ಯಾಪಾರಿಕರಣ, ಸಾಂಸ್ಕೃತಿಕ ದಿವಾಳಿತನದಿಂದ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೋಮುವಾದದಲ್ಲಿ ಹಿಂಸೆ, ಅಪರಾಧಿಭಾವ, ಅಭಿವೃದ್ಧಿ ಕುಂಠಿತವಾಗುತ್ತದೆ. ಇಡೀ ಸಮಾಜ ಅಭದ್ರತೆಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ರಾಮ ಸಸ್ಯಹಾರಿಯೋ, ಮಾಂಸಹಾರಿಯೋ ಎಂದು ಹೇಳಲೂ ಭಯ ಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಬಹುತ್ವದ ಭಾರತದ ಉಳಿವಿಗಾಗಿ ಜನರ ನಡುವೆ ಮುರಿಯುತ್ತಿರುವ ಸೌಹಾರ್ದ ಭಾವವನ್ನು ಕಟ್ಟಬೇಕಾಗಿದೆ. ಇದಕ್ಕಾಗಿ ನಾವು ಧರ್ಮದ ವಿರೋಧಿ ಆಗಬೇಕಿಲ್ಲ. ಬದಲಿಗೆ ಜನರನ್ನು ಜಾಗೃತಗೊಳಿಸಬೇಕಿದೆ ಎಂದರು.
ಬಹುತ್ವಕ್ಕೆ ಧಕ್ಕೆ: ದೇಶದಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ ಪ್ರಧಾನವಲ್ಲ. ಸಂವಿಧಾನ ಒಪ್ಪಿರುವ ಬಹುತ್ವಕ್ಕೆ ಆದ್ಯತೆ ಸಿಗಬೇಕಿದೆ. ಆದರೆ ಇಂದು ಬಹುತ್ವಕ್ಕೆ ಧಕ್ಕೆ ತರುವ ಕೆಲಸ ಪ್ರಧಾನವಾಗುತ್ತಿದೆ. ಉಳಿದ ಧರ್ಮಗಳು ಗೌಣ, ಹಿಂದು ಧರ್ಮ ಶ್ರೇಷ್ಠ ಎನ್ನುವವವರೇ ಬಹುಸಂಖ್ಯಾತರಿದ್ದಾರೆ. ಇದನ್ನು ಯಾವ ರೀತಿ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ ಎಂದು ಹಿರಿಯ ಚಿಂತಕ ಕೆ. ಮರುಳಸಿದ್ದಪ್ಪ ಹೇಳಿದರು.
ಜಾತಿ, ಧರ್ಮದ ಲೇಪ: ಚುನಾವಣೆಗಳು ಸಮೀಪಿಸಿದಂತೆ ರಾಜಕೀಯ ಪಕ್ಷಗಳು ಹೊಸ ಹೊಸ ವಿಷಯಗಳನ್ನು ಮುನ್ನೆಲೆಗೆ ತರುತ್ತಿವೆ. ಉತ್ತರ ಭಾರತದಲ್ಲಿ ಶಿವ ಹೆಚ್ಚು ಪ್ರಚಲಿತದಲ್ಲಿದ್ದಾನೆ. ಅಲ್ಲಿ ಸಣ್ಣಸಣ್ಣ ಶಿವನ ದೇವಾಲಯಗಳನ್ನು ನೋಡಬಹುದು. ಆದರೆ ಈಗ ಅಲ್ಲಿ ರಾಮನನ್ನು ಬಲವಂತವಾಗಿ ಹೇರಲಾಗುತ್ತಿದೆ. ಇನ್ನು, ವಿಶ್ವಮಾನವ ಪರಿಕಲ್ಪನೆ ನೀಡಿದ ಕುವೆಂಪು ಅವರನ್ನು ಒಕ್ಕಲಿಗರು ಎಂದು ಬಿಂಬಿಸಲಾಗುತ್ತಿದೆ. ಅದೇ ರೀತಿ, ಬಸವಣ್ಣ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಬೇಸರ ವ್ಯಕ್ತಪಡಿಸಿದರು.
ಮಾವನ ಸರಪಳಿ: ಹುತಾತ್ಮರ ದಿನದಂದು (ಜ. 30) ರಾಜ್ಯದೆಲ್ಲೆಡೆ ನಾಡಿನ ಸೌಹಾರ್ದ ಪರಂಪರೆಯನ್ನು ಮೇಲೆತ್ತುವ ‘ಸೌಹಾರ್ದ ಮಾನವ ಸರಪಳಿ’ಯಲ್ಲಿ ಎಲ್ಲ ವರ್ಗಗಳ ಲಕ್ಷಾಂತರ ಜನರನ್ನು ಅಣಿಗೊಳಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಹೋರಾಟಗಾರ ಎಸ್. ವೈ ಗುರುಶಾಂತ್ ಅವರು ಸಮಾವೇಶದ ನಿರ್ಣಯ ಮಂಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಸಾಹಿತಿ ನಾ. ಡಿಸೋಜಾ, ರೈತ ಮುಖಂಡ ಬಡಗಲಪುರ ನಾಗೇಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು. ಬಸವರಾಜ, ಸೌಹಾರ್ದ ಕರ್ನಾಟಕದ ಬಿ. ರಾಜಶೇಖರಮೂರ್ತಿ ಇತರರಿದ್ದರು.