ಚಂದ್ರಮ್ಮಗೆ ‘ಸೆಲ್ಯೂಟ್ ದ ಸೈಲೆಂಟ್ ಸ್ಟಾರ್’ ಪುರಸ್ಕಾರ

ಚಂದ್ರಮ್ಮಗೆ ‘ಸೆಲ್ಯೂಟ್ ದ ಸೈಲೆಂಟ್ ಸ್ಟಾರ್’ ಪುರಸ್ಕಾರ
Published on

ಸೋಮವಾರಪೇಟೆ: ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 13 ವರ್ಷಗಳಿಂದ ಡಿ ಗ್ರೂಪ್ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಮ್ಮ ಅವರ ಉತ್ತಮ ಸೇವೆಯನ್ನು ಗುರುತಿಸಿ ಜೇಸಿಐ ಕಾರ್ಯಕ್ರಮದಡಿಯಲ್ಲಿ ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದ ವತಿಯಿಂದ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವನ್ನು ಸೋಮವಾರಪೇಟೆ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕಿರಣ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. ಶಾಂತಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಂದ್ರಮ್ಮ ಅವರು ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ರೋಗಿಗಳನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ. ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ಕೊಡುವುದು ಆರೋಗ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೇಸಿಐ ಪುಷ್ಪಗಿರಿ ಸೋಮವಾರಪೇಟೆ ಘಟಕದ ಅಧ್ಯಕ್ಷ ಎಸ್.ಆರ್.ವಸಂತ್ ಮಾತನಾಡಿ, ಸಮಾಜದಲ್ಲಿ ಯಾವುದೇ ಪ್ರಚಾರ ಬಯಸದೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವವರನ್ನು ಗುರುತಿಸಿ ಗೌರವಿಸುವುದು ಜೇಸಿಐ ಸಂಸ್ಥೆಯ ಕರ್ತವ್ಯವಾಗಿದೆ ಎಂದರು.

ಸಮುದಾಯ ಅಭಿವೃದ್ಧಿ, ಸಮುದಾಯಗಳಲ್ಲಿ ಧನಾತ್ಮಕ ಮತ್ತು ಸಮರ್ಥನೆಯ ಪ್ರಭಾವವನ್ನು ಸೃಷ್ಟಿಸುವ ಗುರಿಯೊಂದಿಗೆ ಸ್ಥಳೀಯ ಸವಾಲುಗಳನ್ನು ಪರಿಹರಿಸುವ ಯೋಜನೆಗಳಲ್ಲಿ ಭಾಗವಹಿಸಲು ಜೇಸಿಐ ತನ್ನ ಸದಸ್ಯರನ್ನು ಪ್ರೋತ್ಸಾಹಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಂತಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಸುದೀಪ್, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ವಲಯ ಕಾರ್ಯದರ್ಶಿ ಮಾಯಾ ಗಿರೀಶ್, ನಿಕಟ ಪೂರ್ವ ವಲಯ ಅಧಿಕಾರಿ ವಿದ್ಯಾ ಸೋಮೇಶ್, ಖಜಾಂಚಿ ಪುಷ್ಪಕ್, ಪದಾಧಿಕಾರಿ ಮನೋಹರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net