

ಬೆಂಗಳೂರು: 'ಯಾರು ಮರ ಗಿಡಗಳನ್ನು ರಕ್ಷಿಸುತ್ತಾರೋ, ಅವರನ್ನು ಮರ ಗಿಡಗಳೇ ರಕ್ಷಿಸುತ್ತವೆ. ಇದಕ್ಕೆ ರಾಜ್ಯದ ಹೆಮ್ಮೆಯ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಿದರ್ಶನ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಸಿದ್ಧಾರ್ಥ ಎಜ್ಯುಕೇಷನ್ ಸೊಸೈಟಿ, ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಷನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಿತಿ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಆಯೋಜಿಸಿದ್ದ 'ಸಾಲುಮರದ ತಿಮ್ಮಕ್ಕ 113ನೇ ಜನ್ಮದಿನ ಸಂಭ್ರಮ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಿಮ್ಮಕ್ಕನವರು ಮಾಗಡಿ ತಾಲೂಕಿನ ಹುಲಿಕಲ್ನಿಂದ ಕುದೂರು ನಡುವೆ ರಾಜ್ಯ ಹೆದ್ದಾರಿ 94ರಲ್ಲಿ ಸಾಲು ಸಾಲು 8 ಸಾವಿರ ಸಸಿಗಳನ್ನು ನೆಟ್ಟು, ದೂರದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಬೆಳೆಸಿರುವುದು ಜಗತ್ತಿಗೆ ಮಾದರಿಯಾಗಿದೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಲು ಯಾವುದೇ ಪದವಿ, ಸ್ಥಾನಮಾನದ ಅಗತ್ಯವಿಲ್ಲ. ಕಾಯಕನಿಷ್ಠೆ ಇಟ್ಟುಕೊಂಡು ಎಲ್ಲರಿಗೂ ಒಳ್ಳೆಯದು ಮಾಡಬೇಕು ಎಂಬ ಧ್ಯೆಯ ಇದ್ದರೆ ಜಗತ್ತನ್ನೇ ಬದಲಾವಣೆ ಮಾಡಲು ಸಾಧ್ಯವಿದೆ ಎಂಬುದನ್ನು ತಿಮ್ಮಕ್ಕ ಸಾಬೀತು ಪಡಿಸಿದ್ದಾರೆ ಎಂದರು.
ತಿಮ್ಮಕ್ಕ ಅವರಿಗಿರುವ ಪರಿಸರ ಪ್ರೀತಿ, ಕಾಳಜಿ, ಮರಗಳ ಬಗೆಗಿನ ಮಮಕಾರ ಇಂದು ಅವರನ್ನು ರಸುತ್ತಿದೆ. ಮರಗಳೊಂದಿಗೆ ಸತತ ಸಂಪರ್ಕ ಇರುವುದರಿಂದಲೇ ಅವರು ಶುದ್ಧ ಆಮ್ಲಜನಕ ಸೇವಿಸಿ ಆರೋಗ್ಯಪೂರ್ಣ ದೀರ್ಘಾಯುಷ್ಯ ಪಡೆದಿದ್ದಾರೆ. ಅವರು ಇನ್ನಷ್ಟು ಕಾಲ ಬಾಳಬೇಕು, ನಮ್ಮೆಲ್ಲರನ್ನೂ ಮಾರ್ಗದರ್ಶನ ಮಾಡುತ್ತಿರಬೇಕು ಎಂದು ಹೇಳಿದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ನಿಯಂತ್ರಣ ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಎದುರಾದರೆ, ಹಲವೆಡೆ ನಿರೀತ ಪ್ರಮಾಣದಷ್ಟು ಮಳೆಯಾಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತೀವ್ರತೆಯೂ ಹೆಚ್ಚುತ್ತಿದೆ. ಮರಗಳ ಸಂಖ್ಯೆ ಹೆಚ್ಚಳವಾದಾಗ ಮಾತ್ರ ಸಮಸ್ಯೆ ನಿಯಂತ್ರಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಲುಮರದ ತಿಮ್ಮಕ್ಕನವರ ಕಾರ್ಯವನ್ನು ಮುಂದುವರಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ದಿನದಿಂದ ದಿನಕ್ಕೆ ಹಸಿರು ಹೊದಿಕೆ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಜತೆಗೆ ಅಕಾಲಿಕ ಮಳೆ ಪ್ರಮಾಣ ಹೆಚ್ಚುತ್ತಿದ್ದು, ಉಷ್ಣಾಂಶ ಏರಿಕೆಯಾಗುತ್ತಿದೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರು ನಿಸರ್ಗದ ಉಳಿವಿಗೆ ಜೊತೆಯಾಗಬೇಕು.
- ಡಾ.ಜಿ.ಪರಮೇಶ್ವರ್, ಗೃಹ ಸಚಿವ
ಕಾರ್ಯಕ್ರಮದಲ್ಲಿ 'ಪರಿಸರ ಜಾತ್ರೆ' ಹಾಗೂ ಸಾಲುಮರದ ತಿಮ್ಮಕ್ಕ 'ಧ್ವನಿಸುರಳಿ ಬಿಡುಗಡೆ'ಗೊಂಡಿತು. ವಿವಿಧ ಕ್ಷೇತ್ರದ 50ಕ್ಕೂ ಅಧಿಕ ಸಾಧಕರಿಗೆ "ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್' ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರದುರ್ಗದ ಭೋವಿ ಸಂಸ್ಥಾನ ಮಠದ ಪೀಠಾಧ್ಯ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಷನ್ ಅಧ್ಯ ಬಳ್ಳೂರು ಉಮೇಶ್ ಇತರರಿದ್ದರು.