

ಕಿನ್ನಿಗೋಳಿ: ನಂದಿನಿ ನದಿಯಲ್ಲಿ ಸಮುದ್ರದ ಉಪ್ಪು ನೀರು ಹಿಮ್ಮುಖವಾಗಿ ಹರಿಯುತ್ತಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ರೀತಿ ಉಪ್ಪುನೀರು ಹರಿಯುವಿಕೆಯಿಂದಾಗಿ ಮೂಲ್ಕಿ ತಾಲೂಕಿನ ಕೆಮ್ರಾಲ್ ಪಂಚಾಯಿತಿಯ ಪಂಜ, ಕೊಯಿಕುಡೆ ಮತ್ತಿತರೆಡೆ ಸುಮಾರು 100 ಎಕರೆ ಭತ್ತದ ಕೃಷಿಗೆ ಸಮಸ್ಯೆಯಾಗಿದೆ. ಸರಿಯಾದ ಮಳೆ ಇಲ್ಲದೆ ನಂದಿನಿ ನದಿಯಲ್ಲಿ ನೀರು ಹರಿಯದ ಕಾರಣ ಪಾವಂಜೆ ಮೂಲಕ ಸಸಿಹಿತ್ಲುವಿನಲ್ಲಿ ಪಡುಗಡಲು ಸೇರುವಲ್ಲಿ ಸಮುದ್ರದ ನೀರು ಹಿಮ್ಮುಖವಾಗಿ ಹರಿದು ಬರುತ್ತಿದ್ದು ಪಂಜ ಮೊಗಪಾಡಿವರೆಗೆ ಉಪ್ಪು ನೀರು ಇದೆ.
ಮಳೆ ಬಂದು ನದಿಯಲ್ಲಿ ನೀರು ಹರಿದರೆ ನೀರಿನ ರಭಸಕ್ಕೆ ಉಪ್ಪು ನೀರು ಈಚೆಗೆ ಹರಿಯುವುದಿಲ್ಲ. ಈ ಬಾರಿ ಮಳೆ ಕೊರತೆಯಿಂದಾಗಿ ಉಪ್ಪುನೀರು ತುಂಬಿದ್ದು ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ನದಿ ಬಳಿ ಕೆಮ್ರಾಲ್ ಪಂಚಾಯಿತಿಯ ಕುಡಿಯುವ ನೀರಿನ ಬಾವಿ ಇದ್ದು ನೀರು ಸರಬರಾಜಿಗೂ ಸಮಸ್ಯೆಯಾಗಿದೆ.
ಅಣೆಕಟ್ಟು ಬಾಗಿಲು ಬೇಗನೇ ತೆರೆದರು: ಉಪ್ಪು ನೀರು ಹಿಮ್ಮುಖವಾಗಿ ಹರಿಯದಂತೆ ಚೇಳಾರಿನಲ್ಲಿ ಅಣೆಕಟ್ಟು ಇದ್ದು ಪ್ರತಿ ವರ್ಷ ಇದರ ಬಾಗಿಲನ್ನು ಜೂನ್ ಮೊದಲ ವಾರದಲ್ಲಿ ತೆಗೆಯಲಾಗುತ್ತಿತ್ತು. ಈ ಬಾರಿ ಮಳೆ ಇಲ್ಲದ ಕಾರಣ ಜೂನ್ 12ರವರೆಗೆ ಮಳೆಗಾಗಿ ಕಾದು ನಂತರ ಇದರ ಬಾಗಿಲನ್ನು ತೆರೆೆಯಲಾಗಿತ್ತು. ಒಂದೇ ಬಾರಿ ಮಳೆ ಬಂದರೆ ಅಣೆಕಟ್ಟಿನ ಬಾಗಿಲು ತೆರೆಯುವುದು ಕಷ್ಟ ಎಂಬ ಕಾರಣಕ್ಕೆ ನದಿಯಲ್ಲಿ ನೀರು ಹರಿಯುವುದಕ್ಕೂ ಮೊದಲೇ ಈ ಬಾಗಿಲು ತೆರೆದಿದ್ದು ಈ ಹಿಮ್ಮುಖ ಹರಿವಿಗೆ ಕಾರಣ ಎನ್ನಲಾಗಿದೆ.
ಪಂಜ, ಮೊಗಪಾಡಿ, ಕೊಯಿಕುಡೆ ಭಾಗದ ರೈತರು ಪ್ರತಿ ವರ್ಷ ಮೇ ತಿಂಗಳಲ್ಲಿ ಭತ್ತದ ಬಿತ್ತನೆ ಮಾಡುತ್ತಿದ್ದು, ಜೂನ್ ಪ್ರಥಮ ವಾರದಲ್ಲಿ ನಾಟಿ ಕಾರ್ಯ ಸಂಪೂರ್ಣ ಮುಗಿಯುತ್ತದೆ. ಭತ್ತದ ಸಸಿಯನ್ನು 30 ದಿನದ ಒಳಗೆ ನಾಟಿ ಮಾಡಬೇಕಾಗಿದ್ದು, ಈ ಬಾರಿ ಭತ್ತದ ಸಸಿಗೆ 40-50 ದಿನ ಕಳೆದಿದೆ. ನೀರಿನ ಕೊರತೆ, ಅದರಲ್ಲೂ ಉಪ್ಪುನೀರಿನ ಸಮಸ್ಯೆಯಿಂದ ನಾಟಿ ಕಾರ್ಯ ಇನ್ನೂ ಆರಂಭವಾಗಿಲ್ಲ.
ಉಪ್ಪು ನೀರು ಹರಿಯುವ ಕಾರಣ ನಮಗೆ ಬಹಳಷ್ಟು ತೊಂದರೆಯಾಗುತ್ತಿದೆ. ಮಳೆ ಇಲ್ಲದ ಕಾರಣ ಈ ಸಮಸ್ಯೆ. ಕಳೆದ ವರ್ಷ ಈ ಸಂದರ್ಭ ನಾಟಿ ಕಾರ್ಯ ಮುಗಿದಿತ್ತು. ಈ ಬಾರಿ ನೀರಿನ ಸಮಸ್ಯೆಯಿಂದ ಕೃಷಿ ಕೆಲಸ ನೆನೆದಂತೆ ನಡೆಯುತ್ತಿಲ್ಲ.- ಜಗನ್ನಾಥ ದೇವಾಡಿಗ ಪಂಜ ರೈ