

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ, ಕೋಡಿ, ಕೋಟ, ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮುದ್ರ ಸಂಪರ್ಕಿಸುವ ಉಪ್ಪು ನೀರಿನ ಹೊಳೆಯಲ್ಲಿ ಸರ್ಕಾರದ ನೆರವಿನೊಂದಿಗೆ ನೆಡಲಾದ ಕಾಂಡ್ಲಾ ವನ ಸದ್ಯ ಇಡೀ ಹೊಳೆಯನ್ನು ಆಕ್ರಮಿಸಿಕೊಂಡಿದ್ದು, ತ್ಯಾಜ್ಯ ಹಾಗೂ ಹೂಳು ತುಂಬಿ ಕೃಷಿಕರನ್ನು ಹೈರಾಣಾಗಿಸಿದೆ.
ಹಲವು ವರ್ಷಗಳ ಹಿಂದೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಾರಂಪಳ್ಳಿ, ಗುಂಡ್ಮಿ, ಯಕ್ಷಿಮಠ, ಕೋಟ ಗ್ರಾಪಂನ ಕೋಟತಟ್ಟು, ಪಡುಕರೆ, ಕೋಟ ಗ್ರಾಪಂನ ಮಣೂರು, ಪಡುಕರೆ ವ್ಯಾಪ್ತಿಯ ಹೊಳೆಯ ಇಕ್ಕೆಲ ಹಾಗೂ ಮಧ್ಯಭಾಗದಲ್ಲಿ ನೆಡಲಾದ ಕಾಂಡ್ಲಾ ಸದ್ಯ ಬೃಹತ್ ಕಾಡಾಗಿ ಏರ್ಪಟ್ಟಿದೆ. ಇದಲ್ಲದೆ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಗಿಡಗಳ ಬುಡದಲ್ಲಿ ಸೇರಿದ್ದಲ್ಲದೆ ಹೊಳೆಯಲ್ಲಿ ಹೂಳು ತುಂಬಿ ಉಪ್ಪು ನೀರು ಹೊರಬಂದು ಕೃಷಿ ಕಾರ್ಯಕ್ಕೆ ತೊಂದರೆ ಮಾಡುತ್ತಿದೆ. ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಹೊಳೆಯ ಭಾಗವನ್ನು ಗಿಡ ಆಕ್ರಮಿಸಿಕೊಳ್ಳುತ್ತಿದೆ. ಸಂಬಂಧಪಟ್ಟ ಇಲಾಖೆ ಎಚ್ಚೆತ್ತು ಹೊಳೆಯ ಮಧ್ಯಭಾಗದಲ್ಲಿರುವ ಕಾಂಡ್ಲಾ ಗಿಡಗಳನ್ನು ತೆರವುಗೊಳಿಸಿ ಜನರ ಬವಣೆ ದೂರ ಮಾಡಬೇಕಿದೆ.
ಹೊಳೆಯಲ್ಲಿ ತುಂಬಿದೆ ಹೂಳು
ಸುಮಾರು ಕಿಲೋಮಿಟರ್ ಗಟ್ಟಲೆ ವ್ಯಾಪ್ತಿಯನ್ನು ಹೊಂದಿಕೊಂಡಿರುವ ಉಪ್ಪು ನೀರಿನ ಹೊಳೆಯ ಭಾಗ ಕೆಸರಿನಿಂದ ಹೂಳು ತುಂಬಿದೆ. ಇದರಿಂದ ಉಪ್ಪುನೀರು ಕೃಷಿ ಪ್ರದೇಶವನ್ನು ಆವರಿಸುತ್ತಿದೆ. ಪ್ರತಿವರ್ಷ ಮಳೆಗಾಲದಲ್ಲೂ ಈ ಸಮಸ್ಯೆ ವಿಪರೀತವಾಗುತ್ತಿದೆ. ನೀರು ಸರಾಗ ಹರಿಯಲಾಗದೆ ಕೃಷಿ ಹಾಗೂ ಮನೆಗಳಿರುವ ಭಾಗವನ್ನು ಆವರಿಸಿಕೊಳ್ಳುತ್ತದೆ. ಶೀಘ್ರ ಹೂಳು ತೆಗೆದರೆ ಜನ ನಿರಾಳವಾಗಿ ಬದುಕುವಂತಾಗುತ್ತದೆ.
ಸ್ಥಳೀಯ ಆಡಳಿತಗಳ ಮನವಿ
ಸಮಸ್ಯೆ ಇರುವ ಪ್ರದೇಶದ ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಗಳು ಗಿಡಗಳನ್ನು ತೆರವುಗೊಳಿಸಿ, ಕೆಸರು ಮುಕ್ತ ಹೊಳೆಯಾಗಿಸಲು ನಿರ್ಣಯ ಕೈಗೊಂಡು ಸರ್ಕಾರದ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ ಪತ್ರದ ಮೂಲಕ ಮನವಿ ಮಾಡಿವೆ.
ತಡೆದಂಡೆ ನಿರ್ಮಿಸಲು ಆಗ್ರಹ
ಕೋಡಿ, ಸಾಲಿಗ್ರಾಮ, ಕೋಟ, ಕೋಟತಟ್ಟು ಗ್ರಾಮಗಳ ಹೊಳೆ/ನದಿಗಳಿಗೆ ತಡೆದಂಡೆ ನಿರ್ಮಿಸಿದರೆ ನೆರೆಯಿಂದ ಮುಕ್ತಿ ಸಿಗಬಹುದು. ಸಾಲಿಗ್ರಾಮ ಪಪಂ ವ್ಯಾಪ್ತಿಯ ಕೆಲವೆಡೆ ಹೊಳೆ ಭಾಗಗಳಲ್ಲಿ ತಡೆದಂಡೆ ನಿರ್ಮಿಸಿ ರಿಂಗ್ ರಸ್ತೆಗಳನ್ನಾಗಿ ಮಾರ್ಪಾಡುಗೊಳಿಸಲಾಗುತ್ತಿದೆ. ಅದೇ ರೀತಿ ಇಲ್ಲಿನ ಪಟ್ಟಣ, ಗ್ರಾಪಂ ವ್ಯಾಪ್ತಿಯ ಹೊಳೆಗಳಿಗೆ ತಡೆದಂಡೆ, ರಸ್ತೆ ನಿರ್ಮಿಸಿದರೆ ಸ್ಥಳೀಯ ಸಮಸ್ಯೆಗಳಿಗೆ ಮುಕ್ತಿ ದೊರಕಬಹುದು. ಅಲ್ಲದೆ ಅದಕ್ಕೆ ಹೊಂದಿಕೊಂಡಿರುವ ಕೃಷಿ ಭೂಮಿಗೂ ಸಹಕಾರಿಯಾಗಬಹುದು ಎಂಬುದು ಜನಸಾಮಾನ್ಯರ ಆಶಯ.
ಆಮ್ಲಜನಕ ಸೃಷ್ಟಿಗೆ ಬಹು ಪೂರಕ ಎಂಬ ನೆಲೆಯಲ್ಲಿ ಕಾಂಡ್ಲವನ ನಿರ್ಮಿಸಲಾಗಿತ್ತು. ಆದರೆ ಬರುಬರುತ್ತಾ ಕಾಂಡ್ಲ ಗಿಡಗಳು ದಟ್ಟ ಅರಣ್ಯವಾಗಿ ಹೊಳೆಯನ್ನೇ ಬಾಚಿಕೊಳ್ಳುವ ಹಂತದಲ್ಲಿದ್ದು,ಉಪ್ಪು ನೀರಿನ ಕೃತಕ ನೆರೆ ಸೃಷ್ಟಿಗೆ ಕಾರಣವಾಗಿ ಕೃಷಿ ಭೂಮಿಗೆ ಹಾನಿಯಾಗುತ್ತಿದೆ. ಒಳನಾಡು ಮೀನುಗಾರಿಕೆಗೆ ಮಾರಕವಾಗಿ ಪರಿಣಮಿಸಿದೆ. ಆದಷ್ಟು ಬೇಗ ಹೊಳೆಯ ಮಧ್ಯಕ್ಕೆ ಆವರಿಸಿರುವ ಕಾಂಡ್ಲ್ಲಾದಿಂದ ಮುಕ್ತಿಗೊಳಿಸಬೇಕು.
ರೇಖಾ ಕೇಶವ ಕರ್ಕೇರ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ
10 ವರ್ಷಗಳಿಂದ ಈಚೆಗೆ ಸೀತಾ ನದಿ ಉಪ್ಪು ನೀರು ಕೃಷಿ ಪ್ರದೇಶಕ್ಕೆ ನುಗ್ಗಿ ಬರುತ್ತಿದ್ದು. ಇತ್ತೀಚಿನ ದಿನಗಳಲ್ಲಿ ಇದು ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ಸಮಯದಲ್ಲಿ ಅಧಿಕವಾಗುತ್ತಿದೆ. ಮಳೆಗಾಲದ ಭತ್ತ ಕೃಷಿ ಬಿಟ್ಟು ಬೇರೆ ಯಾವುದೇ ಬೆಳೆ ಬೆಳೆಯಲಿಕ್ಕೆ ಕೃಷಿಕರಿಗೆ ಆಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಹೊಳೆಯ ಮಧ್ಯ ಭಾಗದಲ್ಲಿ ಕಾಂಡ್ಲಾ ವನ ನಿರ್ಮಾಣಗೊಂಡಿರುವುದು. ಇದರಿಂದ ಉಬ್ಬರ ಹಾಗೂ ಇಳಿತ ಸಮಯದಲ್ಲಿ ನೀರು ಸರಾಗವಾಗಿ ಸಮುದ್ರಕ್ಕೆ ಸೇರುವುದಿಲ್ಲ. ಶೀಘ್ರ ಹೂಳೆತ್ತುವ ಕಾಮಗಾರಿ ಆಗಬೇಕು.
ಕೃಷ್ಣ ಪೂಜಾರಿ ಪಿ., ಕೋಡಿ ಪಂಚಾಯಿತಿ ಸದಸ್ಯ
ಕಾಂಡ್ಲಾ ವನ ತೆಗೆಯಲು ಕಾನೂನಿನ ತೊಡಕು ಇದೆ. ಹೊಳೆಯಲ್ಲಿ ತ್ಯಾಜ್ಯ ತೆರವುಗೊಳಿಸಿ, ಕೆಸರನ್ನು ಡ್ರೆಜ್ಜಿಂಗ್ ಮಾಡುವ ಮೂಲಕ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬಹುದೇ ವಿನಾಃ ಕಾಂಡ್ಲಾ ವನಗಳನ್ನು ಕಡಿಯಲು ಅವಕಾಶ ನಮಗೆ ಇಲ್ಲ. ಸ್ಥಳೀಯಾಡಳಿತ ಅಥವಾ ಸ್ಥಳೀಯರು ನಮಗೆ ಮನವಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಬಹುದು.
ಆಶಿಶ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ವಿಭಾಗ